ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಾದೇಶಿಕ ನಿರ್ದೇಶಕರುಗಳ ವರ್ಗಾವಣೆಯಲ್ಲಿ ಭಾರಿ ತಾರತಮ್ಯ/ಅವ್ಯವಹಾರ ಆಗಿದ್ದು, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮೊದಲಿಗೆ ಯಾವುದೇ ವರ್ಗಾವಣೆ ಮಾಡಬೇಕಾದರೆ ಶೈಕ್ಷಣಿಕ ವರ್ಷವನ್ನು ಪರಿಗಣಿಸಬೇಕಾಗುತ್ತದೆ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿ ಕೌಟುಂಬಿಕವಾಗಿ ಸಮಸ್ಯೆ ಉಂಟಾಗುತ್ತದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವರ್ಗಾವಣೆಯ ವಿಷಯವಾಗಿ ಇದುವರೆಗೂ ಯಾವುದೇ ವರ್ಗಾವಣೆ ನಿಯಮವನ್ನು ಮಾಡಿರುವುದಿಲ್ಲ. ವರ್ಗಾವಣೆ ಪಾಲಿಸಿ ಇರುವುದಿಲ್ಲ ಹಾಗಾಗಿ ವರ್ಗಾವಣೆಯಲ್ಲಿ ಬಲಿಷ್ಠರಿಗೆ ಅನುಕೂಲವಾಗಿ ಉಳಿದವರಿಗೆ ತೊಂದರೆಯಾಗುತ್ತಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 37 ಪ್ರಾದೇಶಿಕ ನಿರ್ದೇಶಕರ ಪೈಕಿ 34 ಪ್ರಾದೇಶಿಕ ನಿರ್ದೇಶಕರನ್ನು ಒಮ್ಮೆಗೆ ವರ್ಗಾವಣೆ ಮಾಡಲಾಗಿದೆ. ಅಂದರೆ ಒಂದೇ ಬಾರಿಗೆ ಒಂದೇ ವೃಂದದ ಸುಮಾರು 97 ಪ್ರತಿಶತ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದು ವರ್ಗಾವಣೆ ನಿಯಮದ ಸ್ಪಷ್ಟ ಉಲ್ಲಂಘನೆ ವರ್ಗಾವಣೆ ಮಾಡುವಾಗ ವಾರ್ಷಿಕ ಇಂತಿಷ್ಟು ಅಂದರೆ ವೃಂದಾವರು 6% ವರ್ಗಾವಣೆ ಮಾಡಲು ಅವಕಾಶ ವಿದ್ದು, ಇಲ್ಲಿ ಒಂದೇ ಬಾರಿಗೆ 97% ರಷ್ಟು ಪ್ರಾದೇಶಿಕ ನಿರ್ದೇಶಕರನ್ನು ವರ್ಗಾವಣೆ ಮಾಡಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ.
ಅಲ್ಲದೇ ಪ್ರಾದೇಶಿಕ ನಿರ್ದೇಶಕರ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಬಹಳ ತಾರತಮ್ಯ ಮಾಡಲಾಗಿದೆ. ಸುಮಾರು 13 ರಿಂದ 15 ವರ್ಷ ಸೇವಾ ಸಲ್ಲಿಸಿರುವ ಹಿರಿಯ ಪ್ರಾದೇಶಿಕ ನಿರ್ದೇಶಕರುಗಳಿಗೆ ದೂರದ ಊರುಗಳಿಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಕೇವಲ ಆರು ತಿಂಗಳಿಗೆ ನೇಮಕಗೊಂಡ ಪ್ರಾದೇಶಿಕರುಗಳಿಗೆ ಕೇಂದ್ರ ಕಚೇರಿಯ ಹತ್ತಿರದ ಪ್ರಾದೇಶಿಕ ಹೆಸರುಗಳು ಅಥವಾ ಪರೀಕ್ಷಾ ಕೇಂದ್ರಗಳಿರುವ ಸ್ವಂತ ಕಟ್ಟಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವರ್ಗಾವಣೆ ಮಾಡಲಾಗಿದೆ. ಇದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ಈ ಹಿಂದೆ ಹಲವು ಕಡೆ ಪರೀಕ್ಷಾ ಆಕ್ರಮಗಳ ಬಗ್ಗೆ ವರದಿಗಳು ಬಂದಿದ್ದವು, ಅಂತಹ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರುಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಹದಿಮೂರು ಹದಿನೈದು ವರ್ಷ ಸೇವೆ ಸಲ್ಲಿಸಿರುವ ಪ್ರಾದೇಶಿಕ ನಿರ್ದೇಶಕರುಗಳಿಗೆ ಬಾಡಿಗೆ ಕಟ್ಟಡಗಳಿಗೆ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರಗಳಿಂದ ದೂರದ ಊರುಗಳಿಗೆ ವರ್ಗಾಯಿಸಲಾಗಿದೆ. ಈ ರೀತಿ ವರ್ಗಾವಣೆ ಮಾಡುವಾಗ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ವರ್ಗಾವಣೆ ಪಟ್ಟಿಯನ್ನು ನೋಡಿದಾಗ ಅವ್ಯವಹಾರ ನಡೆದಿರುವ ಸಂಶಯಗಳು ಬರುತ್ತಿವೆ, ಕೆಲವರನ್ನು ಮೂರು ವರ್ಷಗಳಷ್ಟು ಕಡಿಮೆ ಅವಧಿಯಲ್ಲಿ ಎರಡರಿಂದ ಮೂರು ಕಡೆಗೆ ವರ್ಗಾವಣೆ ಮಾಡಲಾಗಿದೆ ಇನ್ನು ಕೆಲವು ಸಿಬ್ಬಂದಿಗಳಿಗೆ ಅವರು ಕೆಲಸಕ್ಕೆ ಸೇರಿ ಕನಿಷ್ಠ ಎರಡು ವರ್ಷಗಳು ಆಗಿರುವುದಿಲ್ಲ ಅಂತಹವರಿಗೂ ವರ್ಗಾವಣೆ ಮಾಡಲಾಗಿದೆ ಆದ್ದರಿಂದ ತಕ್ಷಣ ಈ ವರ್ಗಾವಣೆ ಆದೇಶವನ್ನು ತಡೆಹಿಡಿಯಬೇಕಾಗಿದೆ.
ವರ್ಗಾವಣೆಗೊಂಡಿರುವ 34 ಜನರ ಪೈಕಿ ಕೇವಲ 3 ನೌಕರರಿಗೆ ಮಾತ್ರ ದುರುದ್ದೇಶಪೂರ್ವಕವಾಗಿ ಕೇವಿಯಟ್ ಹಾಕಿಸಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ಕೇಂದ್ರ ದಿಂದ 300 km ದೂರದ ಊರುಗಳಿಗೆ ವರ್ಗಾಯಿಸಿ, ನ್ಯಾಯಾಲಯಕ್ಕೆ ಹೋಗಲು ಪ್ರಚೋದಿಸಲಾಗಿದೆ. ಕೆಲವರನ್ನು ವಿ.ವಿ ಯಿಂದ ಕೇವಿಯಟ್ ಹಾಕಿ ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದು ವೈಯಕ್ತಿಕವಾಗಿ ದ್ವೇಷದಿಂದ ವರ್ಗಾವಣೆ ಮಾಡಿರುವಂತಿದೆ.
ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕನೊಬ್ಬರು ಎರಡು ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಮಾಡಲಾಗಿದೆ. ಮೊದಲು ಕಾರವಾರ, ನಂತರ ಕಾರವಾರದಿಂದ ಹಜ್ ಭವನ, ಬೆಂಗಳೂರು ಪ್ರಸ್ತುತ ಈಗ ಹಜ್ ಭವನ, ಬೆಂಗಳೂರಿನಿಂದ, ಶಿವಮೊಗ್ಗಕ್ಕೆ ಮಾಡಲಾಗಿದೆ.
ಇನ್ನೊಬ್ಬ ಪ್ರಾದೇಶಿಕ ನಿರ್ದೇಶಕರಿಗೆ ಬಳ್ಳಾರಿಯಿಂದ ಧಾರವಾಡಕ್ಕೆ ನಂತರ ಧಾರವಾಡದಿಂದ ಬೆಳಗಾವಿಗೆ ಪುನಃ ಬೆಳಗಾವಿನಿಂದ ಬಳ್ಳಾರಿಗೆ ವಾಪಸ್ ಈಗ ಈ ಆದೇಶದಲ್ಲಿ ಬಳ್ಳಾರಿಯಿಂದ ಯಾದಗಿರಿಗೆ ಈ ರೀತಿಯಾಗಿ ಕಳೆದ 4 ವರ್ಷದಲ್ಲಿ 4 ಬಾರಿ ವರ್ಗಾವಣೆ ಮಾಡಲಾಗಿದೆ.
ಮತ್ತೊಬ್ಬ ತಾತ್ಕಾಲಿಕ ಮಹಿಳಾ ಪ್ರಾದೇಶಿಕ ನಿರ್ದೇಶಕರಿಗೆ ಬಿಜಾಪುರದಿಂದ ದೂರದ ಮೂಲ ಸೌಲಭ್ಯಗಳಿಲ್ಲದ ಹೊಸಪೇಟೆ ಪ್ರಾದೇಶಿಕ ಕೇಂದ್ರಕ್ಕೆ ಮಹಿಳಾ ಪ್ರಾದೇಶಿಕ ನಿರ್ದೇಶಕರನ್ನು ವರ್ಗಾಹಿಸಿ ಮಹಿಳೆಗೂ ತೊಂದರೆ ಕೊಡಲಾಗಿದೆ.
ಸಂಪೂರ್ಣ ವಿಶ್ವವಿದ್ಯಾನಿಲಯದ ಯಾವುದೇ ವರ್ಗದ ನೌಕರರಿಗೆ ವರ್ಗಾವಣೆ ನೀತಿ ಇಲ್ಲದಿರುವಾಗ ಕೇವಲ ತಾತ್ಕಾಲಿಕ/ ಕಾಲಿಕ ವೇತನ ಶ್ರೇಣಿ ನೌಕರರಾದ ಪ್ರಾದೇಶಿಕ ನಿರ್ದೇಶಕರಿಗೆ ಮಾತ್ರ ಎರಡು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಲು ತೀರ್ಮಾನಿಸಿರುವುದು ಅನುಮಾನ ಮೂಡುತ್ತದೆ. ಯಾಕೆಂದರೆ ಇಲ್ಲಿ ವರ್ಗಾವಣೆಗೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ, ವಿಭಾಗವಾರು ಮಾಡಲಾಗುವುದೇ, ಇಂದಿನಿಂದ ಮುಂದಿನ ಎರಡು ವರ್ಷದ ನಂತರ ಜಾರಿಯಾಗುವುದೇ ಹಾಗೂ 6 ತಿಂಗಳು ಅಥವಾ ಒಂದು ವರ್ಷದಿಂದ ಈಚೆಗೆ ವರ್ಗಾವಣೆಗೊಂಡಿರುವವರಿಗೆ ಯಾವ ರೀತಿ ಅನ್ವಯಿಸಲಾಗುವುದು ಅಥವಾ ಈ ತೀರ್ಮಾನ ಖಾಯಂ ಪ್ರಾದೇಶಿಕ ನಿರ್ದೇಶಕರಿಗೆ ಮಾತ್ರ ಅನ್ವಯವಾಗುವುದೇ, ಒಟ್ಟಾರೆ ಮಕ್ಕಳು, ವಯೋವೃದ್ಧ ಪೋಷಕರು ಕುಟುಂಬಸ್ಥರನ್ನ ಎರಡು ವರ್ಷಗಳಿಗೊಮ್ಮೆ ಸ್ಥಳಾಂತರಿಸಿಕೊಂಡು ಹೋಗಿ ಕಾರ್ಯನಿರ್ವಹಿಸುವುದರಿಂದ ಮಾನಸಿಕವಾಗಿ ತೊಂದರೆಯಾಗುತ್ತದೆ. ಒಟ್ಟಾರೆ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆ ನೀತಿ / ನಿಯಮಾವಳಿ ಮಾಡುವ ತನಕ ವ್ಯವಸ್ಥಾಪನ ಮಂಡಳಿಯ ಈ ತೀರ್ಮಾನವನ್ನು ತಡೆಹಿಡಿಯಬೇಕಿದೆ.
Any transfer must take the academic year into consideration. Transferring in the middle of the academic year can disrupt the children’s education and cause problems for the family.










