ಹಾಸನ: ಅಲ್ಪಸಂಖ್ಯಾತರು ತಮಗೆ ರಕ್ಷಣೆ ನೀಡುತ್ತದೆ ಎಂದು ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಆ ಸಮುದಾಯದ ಮಕ್ಕಳು ಮನೆ ಇಲ್ಲದೇ ಕೊರೆಯುವ ಚಳಿಯಲ್ಲಿ ಮಲಗುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಕೆಲವರು ಇಲ್ಲಿ ಬಂದು ಹೋಗಿದ್ದಾರೆ. ಯಾವ ಸಮುದಾಯಕ್ಕೂ ಯಾವ ಪಕ್ಷವೂ ಶಾಶ್ವತ ಅಲ್ಲ ಎಂದರು.
ಬೆಂಗಳೂರಿನ ಥಣಿಸಂದ್ರ, ಕೋಗಿಲು ಬಡಾವಣೆಗಳ ವ್ಯಾಪ್ತಿಯ ಶಾಸಕರು ಹಾಸನ ಜಿಲ್ಲಾ ಮಂತ್ರಿಗಳೂ ಆಗಿದ್ದಾರೆ. ಅವರಿಗೆ ಅಲ್ಪಸಂಖ್ಯಾತರು ಅಲ್ಲಿ ನಾಲ್ಕೈದು ವರ್ಷಗಳಿಂದ ಮನೆಕಟ್ಟಿರೋದು ಗೊತ್ತಿರಲಿಲ್ವ? ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಈ ವರ್ಷ ಎಂಟು ಡಿಗ್ರಿ ಚಳಿ. ಇಂತಹ ಸ್ಥಿತಿಯಲ್ಲಿ ಏಕಾಏಕಿ ಬುಲ್ಡೋಜರ್ ತಗಂಡೋಗಿ ಮನೆ ಕೆಡವಿದರು. ಸಿರಿಯಾ ಬಾಂಬ್ ಬ್ಲಾಸ್ಟ್ ರೀತಿ ಚಿತ್ರಣ ಕಾಣುತ್ತಿದೆ. ಮುಸ್ಲಿಂ ಬಾಂದವರು ನಿಮಗೆ ರಕ್ಷಣೆ ಕೊಡುತ್ತದೆ ಎಂದು ಕಾಂಗ್ರೆಸ್ ಆಯ್ಕೆ ಮಾಡಿದ್ದೀರಲ್ಲ ? ಚಳಿಯಲ್ಲಿ ನಿಮ್ಮ ಮಕ್ಕಳನ್ನು ಮಲಗಿಸುವ ಸ್ಥಿತಿಗೆ ತಂದಿದ್ದು ಯಾರು? ಆವರು ನಿಮ್ಮನ್ನು ಯಾವ ಸ್ಥಿತಿಯಲ್ಲಿ ಇರಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅಲ್ಲಿ ಜನ ಕಣ್ಣೀರು ಹಾಕುತ್ತಿದ್ದಾರೆ. ಈ ಸರ್ಕಾರಕ್ಕೆ ಮಾನವೀಯತೆ ಬೇಡವೇ? ಎಂದು ವಾಗ್ದಾಳಿ ನಡೆಸಿದರು.
ನಮ್ಮ ಜನತಾ ಸಮಾವೇಶಕ್ಕೆ ಜನರು ಸ್ವಯಂಪ್ರೇರಿತವಾಗಿ ಬಂದಿದ್ದಾರೆ. ಕೇವಲ ಹಾಸನ ಜಿಲ್ಲೆಯವರೇ ಎರಡೂವರೆ ಲಕ್ಷ ಬಂದಿದ್ದಾರೆ. ಆದರೆ ಕಾಂಗ್ರೆಸ್ ಏಳೆಂಟು ಜಿಲ್ಲೆಗಳಿಂದ ಕರೆತರಬೇಕು. ಅಲ್ಲದೇ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳಬೇಕು.
ರಾಜ್ಯದ ನಿವೃತ್ತ ನೀರಾವರಿ ಅಧಿಕಾರಿ ಕೆಲವು ರಾಜಕಾರಣಿಗಳ ಒತ್ತಡಕ್ಕೆ ಮಣಿದು ತೀರ್ಮಾನ ತೆಗೆದುಕೊಂಡು ನಾಲ್ಕು ವರ್ಷ ಶಿಕ್ಷೆಗೆ ಒಳಗಾಗಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ವೀರಪ್ಪನ್ ಹಿಡಿಯಲು ಹೋದ ಪೊಲೀಸರನ್ನು ಬಿಟ್ಟರೆ ಉಡುಗೊರೆ ಕೊಟ್ಟಿರುವುದು ಎಸ್.ಐ.ಟಿ. ತಂಡಕ್ಕೆ ಮಾತ್ರವೇ ಇರಬೇಕು. ಆ ಪ್ರಕರಣದಲ್ಲಿ ಯಾವ್ಯಾವ ರೀತಿ ತನಿಖೆ ನಡೆಸಿದ್ದೀರಿ ನಾನು ಕಂಡಿಲ್ಲವೇ?
ನಿಮ್ಮ ಅಧಿಕಾರಿಗಳು ಇಲಿವಾಲದ ಬಳಿ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದ್ದರು. ಸರಿಪಡಿಸಿಕೊಳ್ಳಿ ಅಂತ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಮೊನ್ನೆ ಪೊಲೀಸ್ ಅಧಿಕಾರಿಯ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿದೆ. ಇದು ನಿಮ್ಮ ಪರಿಶುದ್ಧವಾದ ಆಡಳಿತ. ಯಾವ ದಾಖಲೆ ಮುರಿದಿದ್ದೀರಿ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ದೇವರ ದಯೆಯಿಂದ ಎರಡು ಬಾರಿ ಸಿಎಂ ಆದೆ. ತಂದೆಗೆ ಕೊಟ್ಟ ನೋವು ಕಡಿಮೆ ಮಾಡಲು ನಾನು ಈ ದೇಹಕ್ಕೆ ದಿನಕ್ಕೆ 20 ಗಂಟೆ ಕೆಲಸ ಕೊಟ್ಟೆ. ಜನತಾದರ್ಶನ, ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ತಂದೆ. ಆದರೆ ಈ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಈ ವರ್ಷ ಎಷ್ಟು ಲಕ್ಷ ಕೋಟಿ ಸಾಲ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು










