ಹಾಸನ: ಕುಮಾರಣ್ಣನ ಆರೋಗ್ಯದ ಬಗ್ಗೆ ಯಾರೂ ಕಿಂಚಿತ್ತೂ ಚಿಂತೆ ಮಾಡಬೇಡಿ. ಹಾಸನಾಂಬೆ ಅನುಗ್ರಹ, ಜನರ ಆಶೀರ್ವಾದ, ಅವರ ತಂದೆ-ತಾಯಿ ಮಾಡಿರುವ ಪುಣ್ಯದ ಕೆಲಸಗಳು, ಕಾರ್ಯಕರ್ತರ ಹಾರೈಕೆ ಶ್ರೀರಕ್ಷೆಯಾಗಿವೆ.
ದೇವೇಗೌಡರು ಹಾಗೂ ಕುಮಾರಣ್ಣ ಅವರಿಬ್ಬರೂ ಶತಾಯುಷಿಗಳಾಗಿ ರಾಜ್ಯದ ಜನರ ಸೇವೆ ಮಾಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಗರ ಹೊರವಲಯದ ಬೂವನಹಳ್ಳಿಯಲ್ಲಿ ಶನಿವಾರ ಜನತಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಯಾವ ಹಳ್ಳಿಗೆ ಹೋದರೂ ಜನರು, ನನ್ನ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಾರೆ. ಜನರ ಆಶೀರ್ವಾದದಿಂದ ಅವರು ಆರೋಗ್ಯವಾಗಿದ್ದಾರೆ. ಅವರನ್ನು 2028ರ ಚುನಾವಣೆಯ ನಂತರ ರಾಜ್ಯದ ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ ಎಂದರು.
ರಾಜ್ಯ ಈಗ ರಾಕ್ಷಸರ ಕೈಗೆ ಸಿಕ್ಕಿ ಲೂಟಿಯಾಗುತ್ತಿದೆ. ಇದನ್ನು ತಪ್ಪಿಸಿ ರಾಮರಾಜ್ಯ ನಿರ್ಮಾಣಕ್ಕೆ ಕುಮಾರಣ್ಣ ಮೂರನೇ ಸಿಎಂ ಆಗಬೇಕು. ಮೂರು ಬಾರಿ ರಾಜಕೀಯ ಷಡ್ಯಂತ್ರ ರಚಿಸಿ ನನ್ನನ್ನು ಸೋಲಿಸಲಾಯಿತು. ನಿಖಿಲ್ ಕುಮಾರಸ್ವಾಮಿ ಆದ ನಾನು ಮುಂದೆ ಏನಾಗುತ್ತೀನೋ ಗೊತ್ತಿಲ್ಲ. ನನ್ನ ಹಣೆ ಬರಹ ಇದ್ದಂತೆ ಆಗುತ್ತದೆ.
ನನ್ನ ಭವಿಷ್ಯ ಹಾಸನಾಂಬೆ ತೀರ್ಮಾನ ಮಾಡುತ್ತಾಳೆ. ಆದರೆ ಎಚ್ಡಿಕೆ ಸಿಎಂ ಮಾಡುವುದೊಂದೇ ಈಗ ನನ್ನ ಮುಂದಿರುವ ಗುರಿ. ಇದಕ್ಕಾಗಿ ನಾನು ದಿನದ 18 ಗಂಟೆ ಕೆಲಸ ಮಾಡಲು ಸಿದ್ಧನಿದ್ದೇನೆ. ಕಾರ್ಯಕರ್ತರು ಕರೆದ ಕಡೆಗೆ ಹೋಗಿ ಅವರು ಹೇಳಿದ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದರು.










