ಹಾಸನ: ಮಹಾನ್ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ, ಯಲಗುಂದ ಸರ್ಕಾರಿ ಶಾಲಾ ಆವರಣದಲ್ಲಿ ಎಐಡಿಎಸ್ಓ (AIDSO) ಕಾರ್ಯಕರ್ತರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನೀತಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ AIDSO ಹಾಸನ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಹಾಗೂ ಘನತೆಯ ಬದುಕು ಒದಗಿಸುವ ಸಮ ಸಮಾಜದ ಕನಸನ್ನು ಕಂಡಿದ್ದರೆಂದು ಸ್ಮರಿಸಿದರು.
ಆದರೆ ಇಂದಿನ ಆಡಳಿತ ವ್ಯವಸ್ಥೆಗಳು ಬಡ, ರೈತ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಮಹಾನ್ ನಾಯಕರ ಆಶಯಗಳಿಗೆ ವಿರುದ್ಧವಾಗಿ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಮುಂದಾಗಿವೆ ಎಂದು ಆರೋಪಿಸಿದರು.
ಉನ್ನತೀಕರಣದ ಹೆಸರಿನಲ್ಲಿ ಸಾವಿರಾರು ಗ್ರಾಮೀಣ ಶಾಲೆಗಳಿಗೆ ಬೀಗ ಹಾಕಿ, ಸಾರ್ವಜನಿಕ ಶಿಕ್ಷಣವನ್ನು ಹಿಂದುಳಿಸುವ ನೀತಿಗಳು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು. ನೇತಾಜಿ ನಾಡಿನಲ್ಲಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಪ್ರೇಮಿಗಳು ಹಾಗೂ ಜನಸಾಮಾನ್ಯರು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
AIDSO ಜಂಟಿ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ, ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಖುದಿರಾಮ್ ಬೋಸ್, ಅಶ್ಫಾಖುಲ್ಲಾ ಖಾನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅತ್ಯಾವಶ್ಯಕವಾಗಿದೆ ಎಂದು ತಿಳಿಸಿದರು.
ಪ್ರತಿಭಟನೆ ಕಾರ್ಯಕ್ರಮದಲ್ಲಿ AIDSO ಜಿಲ್ಲಾ ಅಧ್ಯಕ್ಷೆ ಚೈತ್ರ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಜಂಟಿ ಕಾರ್ಯದರ್ಶಿ ಪುರುಷೋತ್ತಮ್, ಕಾರ್ಯಕರ್ತರಾದ ಪರಶುರಾಮ್, ಪ್ರಶಾಂತ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.










