ಗದಗ: ಲಕ್ಕುಂಡಿಯಲ್ಲಿ ವಿಭಿನ್ನ ನಾಣ್ಯ, ಮೂಳೆ ಚೂರು ಪತ್ತೆ : ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ ನಿಧಿ ಅಗೆಯುವ ಜಾಗಕ್ಕೆ ಬಂದಿದ್ದೇಕೆ?

ಗದಗ : ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯ ಸತತವಾಗಿ 6ನೇ ದಿನವೂ ಮುಂದುವರಿದಿದೆ. ದಿನದಿಂದ ದಿನಕ್ಕೆ ಭೂಗರ್ಭದಲ್ಲಿ ಹುದುಗಿಹೋಗಿದ್ದ ಅಪರೂಪದ ಇತಿಹಾಸಿಕ ಕುರುಹುಗಳು ಬೆಳಕಿಗೆ ಬರುತ್ತಿದ್ದು, ಲಕ್ಕುಂಡಿ ಇದೀಗ ಪುರಾತತ್ವ ತಜ್ಞರು ಹಾಗೂ ಇತಿಹಾಸ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ದೇವಾಲಯಗಳ ಚಕ್ರವರ್ತಿ ಲಕ್ಕುಂಡಿ

ಗದಗ ಜಿಲ್ಲೆಯ ಲಕ್ಕುಂಡಿ ಬಾದಾಮಿ ಚಾಲುಕ್ಯರು ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದ ಕಲೆ, ವಾಸ್ತುಶಿಲ್ಪ ಮತ್ತು ಶಿಲ್ಪಸಂಪತ್ತಿಗೆ ಹೆಸರುವಾಸಿಯಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಪ್ರದೇಶವನ್ನು ‘ದೇವಾಲಯಗಳ ಚಕ್ರವರ್ತಿ’ ಎಂದೇ ಕರೆಯಲಾಗುತ್ತದೆ. ಇಂತಹ ಚಾರಿತ್ರಿಕ ನೆಲದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯಕ್ಕೆ ವಿಶೇಷ ಮಹತ್ವ ದೊರೆತಿದೆ.

ನಿಧಿ ಪತ್ತೆಯಾದ ಬಳಿಕ ಉತ್ಖನನಕ್ಕೆ ವೇಗ

ಕೆಲ ದಿನಗಳ ಹಿಂದೆ ಗ್ರಾಮದ ಮನೆಯ ಪಾಯ ಅಗೆಯುವ ವೇಳೆ ನಿಧಿ ಪತ್ತೆಯಾದ ಬೆನ್ನಲ್ಲೇ ಪುರಾತತ್ವ ಇಲಾಖೆ ಸ್ಥಳಕ್ಕೆ ಧಾವಿಸಿತು. ತಕ್ಷಣ ಉತ್ಖನನ ಆರಂಭಿಸಲಾಗಿದ್ದು, ಮನೆಯೊಳಗೆ ಐತಿಹಾಸಿಕ ಈಶ್ವರ ದೇಗುಲದ ಅವಶೇಷಗಳು, ಮಣ್ಣಿನಡಿ ಹೂತಿದ್ದ ಮಡಿಕೆಗಳು ಮತ್ತು ಪಾತ್ರೆಗಳು ಪತ್ತೆಯಾಗಿವೆ.

ವೀರಭದ್ರೇಶ್ವರ ದೇವಾಲಯದ ಮುಂಭಾಗ ನಾಣ್ಯ ಪತ್ತೆ

ಇಂದು ವೀರಭದ್ರೇಶ್ವರ ದೇವಾಲಯದ ಮುಂಭಾಗದಲ್ಲಿ ನಡೆದ ಉತ್ಖನನ ವೇಳೆ ವಿಭಿನ್ನ ಕಾಲಘಟ್ಟಕ್ಕೆ ಸೇರಿದ ನಾಣ್ಯಗಳು ಪತ್ತೆಯಾಗಿವೆ. ನಾಣ್ಯಗಳ ವಿನ್ಯಾಸ ಮತ್ತು ಗಾತ್ರಗಳು ವಿಭಿನ್ನವಾಗಿದ್ದು, ಚಾಲುಕ್ಯರ ಕಾಲದ ಆರ್ಥಿಕ ವ್ಯವಸ್ಥೆ ಬಗ್ಗೆ ಮಹತ್ವದ ಸುಳಿವು ನೀಡುವ ಸಾಧ್ಯತೆ ಇದೆ. ನಾಣ್ಯ ಪತ್ತೆಯಾದ ಬಳಿಕ ಪುರಾತತ್ವ ಇಲಾಖೆ ಅಲರ್ಟ್ ಆಗಿದೆ.

5 ಅಡಿ ಆಳದಲ್ಲಿ ಮೂಳೆ ಚೂರು ಪತ್ತೆ

ಉತ್ಖನನದ ವೇಳೆ ಭೂಮಿಯ ಸುಮಾರು 5 ಅಡಿ ಆಳದಲ್ಲಿ ಮೂಳೆ ಚೂರುಗಳು ಪತ್ತೆಯಾಗಿವೆ. ಇವು ಮಾನವದವೋ ಅಥವಾ ಪ್ರಾಣಿಗಳದವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪತ್ತೆಯಾದ ಮೂಳೆಗಳನ್ನು ಪುರಾತತ್ವ ಇಲಾಖೆ ಸಿಬ್ಬಂದಿ ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆಗಾಗಿ FSL ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

ಹಸಿರು ಕಲ್ಲಿನ ನಾಗರ ಹಾವಿನ ಮೂರ್ತಿ ಪತ್ತೆ

ಲಕ್ಕುಂಡಿಯ ಉತ್ಖನನ ಸ್ಥಳದಲ್ಲಿ ಹಸಿರು ಕಲ್ಲಿನಲ್ಲಿ ಕೆತ್ತಿದ ನಾಗರ ಹಾವಿನ ಮೂರ್ತಿ ಪತ್ತೆಯಾಗಿದ್ದು, ನಿಧಿ ಇರುವ ಬಗ್ಗೆ ಸ್ಥಳೀಯರಲ್ಲಿ ಸಾಕಾರಾತ್ಮಕ ಅನುಮಾನಗಳು ವ್ಯಕ್ತವಾಗಿವೆ. ಹಳೆಯ ಕಾಲದಲ್ಲಿ ನಿಧಿ ಇರುವ ಸ್ಥಳಗಳಲ್ಲಿ ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದರು ಎಂಬ ನಂಬಿಕೆಯ ಹಿನ್ನೆಲೆ ಈ ಪತ್ತೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ನಿಧಿ ಕಾಯುವ ಹಾವು ಎಂಬ ವದಂತಿಗೆ ತಜ್ಞರ ಸ್ಪಷ್ಟನೆ

ನಾಗರ ಮೂರ್ತಿ ಪತ್ತೆಯಾದ ಬೆನ್ನಲ್ಲೇ ನಿಧಿ ಇರುವ ಸ್ಥಳದಲ್ಲಿ ಹಾವು ಇದೆ ಎಂಬ ವದಂತಿ ಹರಡಿತ್ತು. ಇದರ ಹಿನ್ನೆಲೆಯಲ್ಲಿ ಮೈಸೂರಿನಿಂದ ಉರಗ ತಜ್ಞ, ಸ್ನೇಕ್ ಕ್ಯಾಚರ್ ಶಿವರಾಜ್ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಹಾವುಗಳು ದೇವರಲ್ಲ, ನಿಧಿಯನ್ನು ಕಾಯುವುದಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದರು.

ವಿದ್ಯಾರ್ಥಿಗಳ ಕೌತುಕದ ಕೇಂದ್ರವಾದ ಉತ್ಖನನ ಸ್ಥಳ

ಉತ್ಖನನ ನಡೆಯುತ್ತಿರುವ ಲಕ್ಕುಂಡಿ ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೌತುಕದ ಕೇಂದ್ರವಾಗಿದೆ. ಹುಬ್ಬಳ್ಳಿಯ ನೇಕಾರ ನಗರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಕಾರ್ಯವನ್ನು ಕುತೂಹಲದಿಂದ ವೀಕ್ಷಿಸಿದರು. ಇದು ಮಕ್ಕಳಿಗೆ ಜೀವಂತ ಇತಿಹಾಸ ಪಾಠವಾಗಿ ಪರಿಣಮಿಸಿದೆ.

ಉತ್ಖನನ ಸ್ಥಳಕ್ಕೆ ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ ಭೇಟಿ

ಲಕ್ಕುಂಡಿಯ ಉತ್ಖನನ ಸ್ಥಳಕ್ಕೆ ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ ಕೂಡ ಭೇಟಿ ನೀಡಿದರು. ಈ ವೇಳೆ “ನಾನು ನಿಧಿ ಕಳ್ಳತನಕ್ಕೆ ಬಂದಿಲ್ಲ, ಉತ್ಖನನ ನೋಡಲು ಮಾತ್ರ ಬಂದಿದ್ದೇನೆ” ಎಂದು ಹಾಸ್ಯ ಚಟಾಕಿ ಹಾರಿಸಿ ಸುದ್ದಿಯಲ್ಲಿದ್ದರು.

ಇನ್ನಷ್ಟು ಪತ್ತೆಗಳ ನಿರೀಕ್ಷೆ

ಲಕ್ಕುಂಡಿಯಲ್ಲಿ ನಡೆಯುತ್ತಿರುವ ಭೂಗರ್ಭ ಉತ್ಖನನ ಕಾರ್ಯ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪರೂಪದ ಹಾಗೂ ಮಹತ್ವದ ಐತಿಹಾಸಿಕ ಪತ್ತೆಗಳು ನಡೆಯುವ ನಿರೀಕ್ಷೆ ಮೂಡಿಸಿದೆ.