ಹಾಸನ: “ಪ್ರಯತ್ನದ ಜೊತೆಗೆ ಪ್ರಾರ್ಥನೆಯ ಫಲ ಸೇರಿದಾಗಲೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ” ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಮಠಾಧೀಶ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಹೇಳಿದರು.
ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸ್ಕಾಲರ್ಸ್ ಶಾಲೆಯ 14ನೇ ವರ್ಷದ ವಾರ್ಷಿಕೋತ್ಸವ ‘ಸ್ಕಾಲರ್ಸ್ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಸರಿಯಾದ ಸಿದ್ಧತೆ, ಶಿಸ್ತು ಮತ್ತು ಮನಸ್ಸಿನ ಧೈರ್ಯವೇ ಯಶಸ್ಸಿನ ಮೂಲ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಸ್ಕಾಲರ್ಸ್ ಸಂಭ್ರಮೋತ್ಸವದಲ್ಲಿ ವಿಶ್ವ ಒಕ್ಕಲಿಗರ ಮಠ, ಬೆಂಗಳೂರುದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್. ಮಲ್ಲೇಶಗೌಡ, ಹೊಳೆನರಸೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮೇಗೌಡ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಾರ್ಷಿಕೋತ್ಸವಕ್ಕೂ ಮುನ್ನ ಸ್ವಾಮೀಜಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆ ಎಂದರೇನು, ನಿರ್ಭೀತಿಯಿಂದ ಪರೀಕ್ಷೆ ಬರೆಯುವ ವಿಧಾನ, ಪರಿಣಾಮಕಾರಿ ಪರೀಕ್ಷಾ ಸಿದ್ಧತೆ ಹೇಗಿರಬೇಕು ಎಂಬ ವಿಷಯಗಳ ಕುರಿತು ಪ್ರೇರಣಾತ್ಮಕವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಚ್.ಎಲ್. ಮಲ್ಲೇಶಗೌಡ ಅವರು, ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು ಅದರ ಮೌಲ್ಯ, ಚಿಂತನೆ ಮತ್ತು ಧೋರಣೆಯನ್ನು ಪ್ರತಿಬಿಂಬಿಸುತ್ತವೆ. ಉತ್ತಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸ್ಕಾಲರ್ಸ್ ಶಾಲೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಪ್ರಾಂಶುಪಾಲರಾದ ರಾಮೇಗೌಡ ಅವರು, ಕೇವಲ ಕಟ್ಟಡ ನಿರ್ಮಾಣವಲ್ಲ, ಮಕ್ಕಳನ್ನು ಸತ್‌ಪ್ರಜೆಗಳಾಗಿ, ಸರ್ವಾಂಗೀಣ ವ್ಯಕ್ತಿತ್ವ ಹೊಂದಿದವರಾಗಿ ರೂಪಿಸುವ ಮೂಲ ಶಿಕ್ಷಣ ನೀಡುವ ಹಂಬಲ ಸ್ಕಾಲರ್ಸ್ ಶಾಲೆಗೆ ಇರುವುದೇ ಸಂತಸದ ಸಂಗತಿ ಎಂದು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಕಾಳಿ ನೃತ್ಯರೂಪಕ, ಸುಭಾಷ್ ಚಂದ್ರ ಬೋಸರ ದೇಶಪ್ರೇಮದ ನೃತ್ಯ, ಕನ್ನಡಾಭಿಮಾನ ಮೂಡಿಸುವ ಕರ್ನಾಟಕ ವೈಭವ, ಭಾರತದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ನೃತ್ಯ ಪ್ರದರ್ಶನಗಳು ನಡೆದವು. ವಿದ್ಯಾರ್ಥಿಗಳ ಮನಮೋಹಕ ಪ್ರದರ್ಶನಗಳು ಪೋಷಕರು ಹಾಗೂ ಪ್ರೇಕ್ಷಕರನ್ನು ರಂಜಿಸಿದವು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್, ಸಂಸ್ಥಾಪಕಿ ಶ್ರೀಮತಿ ಲಕ್ಷ್ಮೀನಾಗರಾಜು, ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.










