ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಗ್ರ್ಯಾಂಡ್ ಫಿನಾಲೆಗೆ ಸ್ಪರ್ಧಿಗಳು ಸಂಪೂರ್ಣ ಸಿದ್ಧರಾಗಿದ್ದಾರೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಹೇರ್‌ಕಟ್, ಫೇಶಿಯಲ್ ಸೇರಿದಂತೆ ಮೆಕ್‌ಓವರ್ ಮಾಡಿಕೊಂಡಿದ್ದು, ಫಿನಾಲೆಯ ಶೂಟಿಂಗ್ ಕೂಡ ಆರಂಭವಾಗಿದೆ. ನಾಳೆ ಸಂಜೆ 6 ಗಂಟೆಗೆ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ.
ಇಂದು ಫಿನಾಲೆಯ ಡ್ಯಾನ್ಸ್ ಪರ್ಫಾರ್ಮೆನ್ಸ್ ಶೂಟಿಂಗ್ ನಡೆದಿದ್ದು, ಎಲ್ಲಾ ಸ್ಪರ್ಧಿಗಳು ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಡ್ಯಾನ್ಸ್ ಶೂಟಿಂಗ್ ಮುಗಿಸಿ, ಬಳಿಕ ಕಿಚ್ಚ ಸುದೀಪ್ ಅವರ ಮಾತಿನ ಭಾಗದ ಶೂಟಿಂಗ್ ನಡೆಯಲಿದೆ.
ಈ ಬಾರಿ ಫಿನಾಲೆಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಗೌಡ, ಅಶ್ವಿನಿ ಗೌಡ, ರಘು ಹಾಗೂ ಕಾವ್ಯ ಶೈವ ಆಯ್ಕೆಯಾಗಿದ್ದಾರೆ. ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಗೆಲುವಿನ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಗಿಲ್ಲಿ ನಟ ದೊಡ್ಡ ಮತದ ಅಂತರದಿಂದ ಗೆದ್ದಿದ್ದಾರೆ, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ನಡುವೆ ಟೈ ಅಪ್ ಇದೆ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿದ್ದರೂ, ಇವು ಅಧಿಕೃತ ಮಾಹಿತಿ ಅಲ್ಲ, ಕೇವಲ ಗಾಸಿಪ್ ಮಾತ್ರ. ವೀಕ್ಷಕರ ಅಭಿಪ್ರಾಯದಂತೆ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ನಡುವೆ ತೀವ್ರ ಸ್ಪರ್ಧೆ ಇದೆ. ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳು ಆಟೋ ಮೇಲೆ ಪೋಸ್ಟರ್ ಅಂಟಿಸಿ ಮತ ಯಾಚನೆ ಮಾಡುತ್ತಿರುವ ದೃಶ್ಯಗಳು ಕೂಡ ಕಾಣಿಸುತ್ತಿವೆ.
ಫಿನಾಲೆಯಲ್ಲಿ ಸ್ಪರ್ಧಿಗಳ ಜರ್ನಿ ವೀಡಿಯೊ, ವೈರಲ್ ಕ್ಲಿಪ್‌ಗಳು, ಹೆಚ್ಚು ನಕ್ಕು–ಅತ್ತು–ಜಗಳ ಆಡಿದ ಕ್ಷಣಗಳ ಪ್ರದರ್ಶನ ಇರಲಿದೆ. ಜೊತೆಗೆ ‘ಗಿಚ್ಚಿ ಗಿಲಿಗಿಲಿ’ ತಂಡದಿಂದ ಮಿಮಿಕ್ರಿ ಪ್ರದರ್ಶನವೂ ಇರಲಿದೆ. ಮೂರು ತಿಂಗಳ ಮನರಂಜನೆಯ ಹಬ್ಬಕ್ಕೆ ನಾಳೆ ಅಧಿಕೃತ ತೆರೆ ಬೀಳಲಿದೆ.










