ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ಜನವರಿ 17 ಹಾಗೂ 18ರಂದು ನಡೆಯಬೇಕಿತ್ತು. ಆದರೆ, ಕಾರ್ಯಕ್ರಮ ನಿರೂಪಕ ಸುದೀಪ್ ಅವರು ಇಂದು ಆಗಮಿಸಲು ಸಾಧ್ಯವಾಗದ ಕಾರಣ ಫಿನಾಲೆ ಎಪಿಸೋಡ್ ಭಾನುವಾರ ಮಾತ್ರ ನಡೆಯಲಿದೆ. ಈ ಅಚಾನಕ್ ಬದಲಾವಣೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸುದೀಪ್ ಅವರು ಕೆಲ ಸಂದರ್ಭಗಳಲ್ಲಿ ಬಿಗ್ ಬಾಸ್ ಎಪಿಸೋಡ್‌ಗಳನ್ನು ಮಿಸ್ ಮಾಡಿಕೊಂಡಿರುವ ಉದಾಹರಣೆಗಳಿದ್ದರೂ, ಫಿನಾಲೆಯನ್ನು ಕೈ ಬಿಡುತ್ತಿರುವುದು ಇದೇ ಮೊದಲ ಬಾರಿ. ಇದುವರೆಗೆ ಪ್ರತೀ ಸೀಸನ್‌ನಲ್ಲಿ ಎರಡು ದಿನಗಳ ಕಾಲ ಫಿನಾಲೆ ನಡೆಯುತ್ತಿತ್ತು. ಆದರೆ ಈ ಬಾರಿ ಒಂದೇ ದಿನಕ್ಕೆ ಸೀಮಿತವಾಗಿರುವುದು ವಿಶೇಷವಾಗಿದೆ.
ಸುದೀಪ್ ಗೈರಾಗಲು ಸ್ಪಷ್ಟ ಕಾರಣವಿದೆ. ಅವರು ಪ್ರಸ್ತುತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ‘ಪಂಜಾಬ್ ದೆ ಶೇರ್’ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆಲುವು ಸಾಧಿಸಿದೆ. ಪಂದ್ಯ ಮುಗಿದ ತಕ್ಷಣ ರಾತ್ರೋರಾತ್ರಿ ಬೆಂಗಳೂರಿಗೆ ಬಂದು ಬೆಳಿಗ್ಗೆ ಫಿನಾಲೆ ನಡೆಸಿಕೊಡುವುದು ಅಸಾಧ್ಯವಾಗಿದ್ದರಿಂದ, ಒಂದು ದಿನ ಬಿಡುವು ಪಡೆದು ಭಾನುವಾರ ಫಿನಾಲೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಇಂದು ನಡೆಯುವ ಪ್ರೀ-ಫಿನಾಲೆಗೆ ಸುದೀಪ್ ಆಗಮಿಸಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಇನ್ನು ಇಂದಿನ ಎಪಿಸೋಡ್ ಬಗ್ಗೆ ಮಾತನಾಡುವುದಾದರೆ, ಇಂದು ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷ ಡ್ಯಾನ್ಸ್ ಪ್ರದರ್ಶನಗಳು ಇಂದು ವೀಕ್ಷಕರಿಗೆ ದೊರಕುವ ಸಾಧ್ಯತೆ ಇದೆ. ಭಾನುವಾರ ಬೆಳಗ್ಗೆ 10 ಗಂಟೆಯವರೆಗೆ ವೋಟಿಂಗ್ ಅವಕಾಶ ಇರಲಿದ್ದು, ಆರು ಮಂದಿ ಸ್ಪರ್ಧಿಗಳ ಪೈಕಿ ನಾಲ್ವರು ಎಲಿಮಿನೇಟ್ ಆಗಿ, ಒಬ್ಬ ವಿನ್ನರ್ ಹಾಗೂ ಒಬ್ಬ ರನ್ನರ್-ಅಪ್ ಘೋಷಣೆ ಭಾನುವಾರವೇ ನಡೆಯಲಿದೆ. ಫಿನಾಲೆ ಎಪಿಸೋಡ್ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.










