ಸಕಲೇಶಪುರ: ವಿದ್ಯುತ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸೆಸ್ಕ್ ಲೈನ್‌ಮ್ಯಾನ್ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಬುಧುವಾರ ಸಂಭವಿಸಿದೆ.
ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ, ಸೆಸ್ಕ್ ಲೈನ್‌ಮ್ಯಾನ್ ಗೋಪಿ (37) ಗಾಯಗೊಂಡ ಸಿಬ್ಬಂದಿಯಾಗಿದ್ದಾರೆ.

ಉದೇವಾರ ಫೀಡರ್ ವ್ಯಾಪ್ತಿಯ ಹಲಸುಲಿಗೆ ಕ್ಯಾಂಪ್‌ನಲ್ಲಿ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ದುರಸ್ತಿ ಕಾರ್ಯಕ್ಕಾಗಿ ಮಾರ್ಗ ಮುಕ್ತತೆ (ಶಟ್‌ಡೌನ್) ಪಡೆಯಲಾಗಿದ್ದು, ಇನ್ನೇನು ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಯಬೇಕಾದ ಸಂದರ್ಭದಲ್ಲಿ ಉಪಕೇಂದ್ರದಲ್ಲಿ ಉಂಟಾದ ಗೊಂದಲದಿಂದ ಅಕಾಲಿಕವಾಗಿ ವಿದ್ಯುತ್ ಸರಬರಾಜು ನೀಡಲಾಗಿದೆ. ಪರಿಣಾಮವಾಗಿ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೋಪಿ ಅವರಿಗೆ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯವಾಗಿದೆ.
ಘಟನೆಯಲ್ಲಿ ಬಾಳ್ಳುಪೇಟೆ ಹಾಗೂ ಶುಕ್ರವಾರಸಂತೆ ಉಪಕೇಂದ್ರಗಳ ಜೂನಿಯರ್ ಇಂಜಿನಿಯರ್‌ಗಳ ಮಾರ್ಗ ಮುಕ್ತತೆ ಪಡೆದುಕೊಂಡಿದ್ದರು. ಈ ನಡುವೆ ಶುಕ್ರವಾರಸಂತೆ ಜೂನಿಯರ್ ಇಂಜಿನಿಯರ್ ಲೋಕೇಶ್ ಅವರು ಜೂನಿಯರ್ ಇಂಜಿನಿಯರ್ ವಾಪಾಸ್ ವಿದ್ಯುತ್ ಸರಬರಾಜು ನೀಡಲು ಮನವಿ ಮಾಡಿದ್ದಾರೆ. ಆದರೆ ಉಪಕೇಂದ್ರದಲ್ಲಿ ಶುಕ್ರವಾರಸಂತೆ ಕಡೆಗೆ ವಿದ್ಯುತ್ ನೀಡುವ ಬದಲು ಉದೇವಾರ ಫೀಡರ್ ಫೀಡರ್ ವಿದ್ಯುತ್ ಸರಬರಾಜು ನೀಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಗೋಪಿ ಅವರನ್ನು ಮೊದಲು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹರೀಶ್ ತಿಳಿಸಿದ್ದಾರೆ.
An incident occurred on Friday in Halasulige village of the taluk where a CESC lineman was seriously injured after being electrocuted while carrying out electrical repairs










