ಬೆಂಗಳೂರು: ಪ್ರೇಯಸಿಯೊಂದಿಗೆ ಒಂದೇ ಕೊಠಡಿಯಲ್ಲಿ ಇದ್ದಾಗಲೇ ಪತಿಯನ್ನು ಪತ್ನಿ ರೆಡ್ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆಡ್ರೆಲಾ ಜಾಕೂಬ್ ಆರೂಪ್ ಎಂಬ ಟೆಕ್ಕಿ ಪತಿ ಸಿಕ್ಕಿಬಿದ್ದಿದ್ದಾನೆ.
ಏನಿದು ಪ್ರಕರಣ?
ಜೆಡ್ರೆಲಾ ಜಾಕೂಬ್ ಆರೂಪ್ ಕಳೆದ ಎರಡು ವರ್ಷಗಳಿಂದ ಪತ್ನಿಯೊಂದಿಗೆ ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಪತ್ನಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಳು. ಆರಂಭದಲ್ಲಿ ಉದ್ಯೋಗವಿಲ್ಲದಿದ್ದ ಆರೋಪಿ ಪತಿಗೆ, ಪತ್ನಿಯೇ ತನ್ನ ಕೆಲಸವನ್ನು ಕೊಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳದ ಕೆಲಸವನ್ನು ಪತಿಗೆ ಒಪ್ಪಿಸಿದ್ದಳು ಎನ್ನಲಾಗಿದೆ.
ಆರೋಪ ಏನು?
ದಂಪತಿಗೆ ಒಂದು ಮಗು ಇದೆ. ಮಗು ಜನಿಸಿದ ಬಳಿಕ ಆರೋಪಿ ತನ್ನ ನಿಜ ಸ್ವರೂಪ ತೋರಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಮತ್ತೆ ಗರ್ಭಿಣಿಯಾಗಿದ್ದ ವೇಳೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ, ಗರ್ಭಪಾತಕ್ಕೆ ಕಾರಣನಾದ ಆರೋಪವೂ ಇದೆ. ಇದಲ್ಲದೆ ಪತ್ನಿಗೆ ತಿಳಿಯದೆ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ ಎಂದು ದೂರಲಾಗಿದೆ. ಈ ಎಲ್ಲ ಕಾರಣಗಳಿಂದ ನೊಂದ ಪತ್ನಿ ಕೆಲಕಾಲ ಆಂಧ್ರಕ್ಕೆ ತೆರಳಿದ್ದಳು.
ನಿನ್ನೆ ದಿಢೀರ್ ಆಗಿ ಬೆಂಗಳೂರಿಗೆ ಬಂದ ಪತ್ನಿ, ಪತಿ ಪರಸ್ತ್ರೀಯೊಂದಿಗೆ ಒಂದೇ ಪಿಜಿಯಲ್ಲಿ ಇರುವ ಮಾಹಿತಿ ಪಡೆದು ಪೊಲೀಸರ ನೆರವು ಪಡೆದಿದ್ದಾಳೆ. ಸಾಕ್ಷ್ಯಗಳೊಂದಿಗೆ ಪೊಲೀಸರು ಪಿಜಿಗೆ ದಾಳಿ ನಡೆಸಿ, ಒಂದೇ ಕೊಠಡಿಯಲ್ಲಿ ಇಬ್ಬರೂ ಇದ್ದ ವೇಳೆ ಪತಿಯನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಹೇಳಿದ್ದೇನು?
“ನಾನು ಆಂಧ್ರ ಮೂಲದವಳು. ನನ್ನ ಪತಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಯಿತು. ಅವರು ಒಂದೇ ಪಿಜಿಯಲ್ಲಿ ಇದ್ದಾರೆ ಎಂಬ ಮಾಹಿತಿ ಬಂದ ಬಳಿಕ ಪೊಲೀಸರ ಸಹಾಯ ಪಡೆದೆ. ಅಧಿಕಾರಿಗಳೊಂದಿಗೆ ಪಿಜಿಗೆ ತೆರಳಿ ನೋಡಿದಾಗ, ಇಬ್ಬರೂ ಒಂದೇ ರೂಮಿನಲ್ಲಿ ಇದ್ದರು” ಎಂದು ಸಂತ್ರಸ್ತೆ ಕಣ್ಣೀರಿನಿಂದ ಹೇಳಿದ್ದಾಳೆ.
ಪ್ರಸ್ತುತ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಪತ್ನಿಯ ದೂರಿನ ಮೇರೆಗೆ ಅಟ್ರಾಸಿಟಿ ಸೇರಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಡಿಸಿಆರ್ ಇ ಪಶ್ಚಿಮ ವಿಭಾಗ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.










