ಚಂಡೀಗಢ: ಹರ್ಯಾಣದ ರೇವಾರಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ನಡೆಸಿ ಗರ್ಭಿಣಿಯನ್ನಾಗಿಸಿದ ಆರೋಪದಡಿ ಜೂನಿಯರ್ ಮಹಿಳಾ ಹಾಕಿ ತಂಡದ ಕೋಚ್ನ್ನು ಪೊಲೀಸರು ಬಂಧಿಸಿದ್ದಾರೆ.
ರೇವಾರಿ ಜಿಲ್ಲೆಯ ಹಳ್ಳಿಯೊಂದರ 12ನೇ ತರಗತಿ ವಿದ್ಯಾರ್ಥಿನಿ ಶುಕ್ರವಾರ ಖೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಾಕಿ ಆಟಗಾರ್ತಿಯಾಗಿದ್ದ ಈ ಬಾಲಕಿಗೆ ಕಳೆದ ಮೂರು ವರ್ಷಗಳಿಂದ ಕೋಚ್ ಪರಿಚಯವಾಗಿದ್ದು, ನಾಲ್ಕು ತಿಂಗಳ ಹಿಂದೆ ತರಬೇತಿ ಪಡೆಯುತ್ತಿದ್ದ ಸ್ಟೇಡಿಯಂನ ಬಾತ್ರೂಮ್ನಲ್ಲಿ ಅತ್ಯಾ*ಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಘಟನೆಯ ಬಳಿಕ ಬಾಲಕಿ ಗರ್ಭಿಣಿಯಾಗಿದ್ದು, ಆರೋಗ್ಯ ಹದಗೆಟ್ಟ ಕಾರಣ ಜನವರಿ 5ರಂದು ಗರ್ಭಪಾತವಾಗಿದೆ. ನಂತರ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕೋಚ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.










