ಬೆಂಗಳೂರು : ನಟಿ ಹಾಗೂ ರಾಜಕಾರಣಿ ರಮ್ಯಾ, ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, “ಎಲ್ಲಾ ಪುರುಷರನ್ನೂ ಜೈಲಿಗೆ ಹಾಕಿ ಎನ್ನುವುದೇ ಪರಿಹಾರವೇ?” ಎಂದು ಪ್ರಶ್ನಿಸಿದ್ದಾರೆ.
ಬೀದಿನಾಯಿಗಳ ಹಾವಳಿ ಕುರಿತಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಈ ವೇಳೆ “ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವಾಗ ಕಚ್ಚುತ್ತವೆ, ಯಾವಾಗ ಕಚ್ಚುವುದಿಲ್ಲ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಮ್ಯಾ, ಅದನ್ನು ಪುರುಷರ ವರ್ತನೆಯೊಂದಿಗೆ ಹೋಲಿಕೆ ಮಾಡಿದ್ದಾರೆ. “ಪುರುಷನ ಮನಸ್ಸನ್ನೂ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅವನು ಯಾವಾಗ ಅತ್ಯಾಚಾರ ಮಾಡ್ತಾನೋ, ಯಾವಾಗ ಕೊಲೆ ಮಾಡ್ತಾನೋ ಗೊತ್ತಿಲ್ಲ. ಹಾಗಾದರೆ ಎಲ್ಲಾ ಪುರುಷರನ್ನೂ ಜೈಲಿಗೆ ಹಾಕಬಹುದೇ?” ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ.
ಈ ಮೂಲಕ ಬೀದಿನಾಯಿಗಳ ಕುರಿತ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ರಮ್ಯಾ ಪರೋಕ್ಷವಾಗಿ ಟೀಕಿಸಿದ್ದು, ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.










