ಸಕಲೇಶಪುರ: ಶೋಷಿತ ಸಮಾಜ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ರಾಜ್ಯ ಬೌದ್ಧ ಮಹಾಸಭೆಯ ರಾಜ್ಯಾಧ್ಯಕ್ಷ ಸಿದ್ದರಾಜು ಹೇಳಿದರು.
ಗುರುವಾರ ಪಟ್ಟಣದ ಹಳೆಯ ಬಸ್ ನಿಲ್ದಾಣದ ಸಮೀಪ ಬೀಮಾ ಕೊರೇಗಾಂವ್ ವಿಜಯೋತ್ಸವ ಸಮಿತಿ ಹಮ್ಮಿಕೊಂಡಿದ್ದ 8ನೇ ವರ್ಷದ ಬೀಮಾ ಕೊರೇಗಾಂವ್ ವಿಜಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಯುವಜನಾಂಗ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಯೊಂದು ನಡೆ-ನುಡಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
208 ವರ್ಷಗಳ ಹಿಂದೆ ನಡೆದ ಕೊರೇಗಾಂವ್ ಯುದ್ಧ ಅಸ್ಪೃಶ್ಯತೆಯ ವಿರುದ್ಧ ನಡೆದ ಮೊದಲ ಹೋರಾಟವಾಗಿದ್ದು, ಬಹುಜನರ ಇತಿಹಾಸವನ್ನು ಬರೆಯದೇ ಇರುವುದು ದೊಡ್ಡ ದುರಂತವಾಗಿದೆ ಎಂದರು.
ಶಿಕ್ಷಣದಿಂದ ಮಾತ್ರ ಶೋಷಿತ ಸಮಾಜದ ಉನ್ನತಿ ಸಾಧ್ಯವೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.
ಮನುವಸ್ಮೃತಿಯನ್ನು ಜೀವನಪೂರ್ತಿ ವಿರೋಧಿಸಿದ ಅಂಬೇಡ್ಕರ್ ಮಹಾನ್ ಮಾನವತಾವಾದಿಯಾಗಿದ್ದರು. ಇಂದು ಶಿಕ್ಷಣವಿಲ್ಲದ ಮನುಷ್ಯನು ಪಶುವಿಗೆ ಸಮಾನ ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಯಾರೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದರು. ಇಂದಿನ ದಿನಗಳಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಬದಲಿಗೆ ಮನುವಸ್ಮೃತಿಯನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಶೋಷಿತ ಸಮಾಜ ಎಚ್ಚರಿಕೆಯಿಂದ ಇರಬೇಕು.
ಜಾತಿ ದೇಶಕ್ಕೆ ಮಾರಕವೆಂದಾದರೆ, ಜಾತಿಯನ್ನು ಅನುಸರಿಸುವ ವ್ಯಕ್ತಿಯೂ ಅಪಾಯಕಾರಿಯೇ. ಅಂತಹ ಮನೋಭಾವದ ವಿರುದ್ಧ ದಲಿತರ ಜಾಗೃತಿ ಅಗತ್ಯವಿದೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಲೇಖಕಿ ಅನುಪಮ ಮಾತನಾಡಿ, ಶೋಷಿತ ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ. ಇತಿಹಾಸವನ್ನು ಮರುಪರಿಶೀಲಿಸುವ ಮೂಲಕ ಮಾತ್ರ ಜಾಗೃತಿ ಸಾಧ್ಯ ಎಂದು ತಿಳಿಸಿದರು. ಅವಮಾನವನ್ನು ಸಹಿಸದವರು ಮಾತ್ರ ಗೆಲ್ಲಲು ಸಾಧ್ಯವೆಂಬ ಪಾಠವನ್ನು ಕೊರೇಗಾಂವ್ ಕಾಳಿಗಳು ನಮಗೆ ಕಲಿಸಿದ್ದಾರೆ. ಶೋಷಿತ ಸಮಾಜ ಸದಾ ಜಾಗೃತವಾಗಿರಬೇಕು. ಅಂಬೇಡ್ಕರ್ ನಿಜವಾದ ಶಾಂತಿವಾದಿಯಾಗಿದ್ದರು; ಆದರೆ ಇದನ್ನು ಇನ್ನೂ ಸರಿಯಾಗಿ ಗುರುತಿಸಲಾಗಿಲ್ಲ ಎಂದರು.
ವಕೀಲ ಸುಧೀರ್ ಕುಮಾರ್ ಮುರುಡಿ ಮಾತನಾಡಿ, ಕೊರೇಗಾಂವ್ ವಿಜಯೋತ್ಸವದ ನಂತರ ದಲಿತರಿಗೆ ತಮ್ಮ ಶಕ್ತಿಯ ಅರಿವು ಮೂಡಿದೆ ಎಂದರು. ನಮ್ಮೊಂದಿಗೇ ಇದ್ದು ನಮ್ಮ ವಿರುದ್ಧ ಕೆಲಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಶೋಷಿತರ ವಿರುದ್ಧ ಇರುವವರಿಗೆ ಮತ ನೀಡಬಾರದು, ನಮ್ಮ ಮತಗಳು ವ್ಯರ್ಥವಾಗಬಾರದು ಎಂದರು. ಶೋಷಿತರ ಮೊದಲ ಗೆಲುವೇ ಕೊರೇಗಾಂವ್ ಯುದ್ಧವಾಗಿದ್ದು, ಇದನ್ನು ಇತಿಹಾಸದಲ್ಲಿ ದಾಖಲಿಸದೇ ಇರುವುದು ಶೋಷಿತ ಸಮಾಜಕ್ಕೆ ಮಾಡಿದ ದ್ರೋಹವಾಗಿದೆ. ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ಎಚ್ಚರವಾಗಿರಬೇಕು. ಜಾಗೃತಿ ಮೂಡಿಸುವ ಉದ್ದೇಶದಿಂದ ಕೊರೇಗಾಂವ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಮಿನಿ ವಿಧಾನಸೌಧದ ಸಮೀಪದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಕೊರೇಗಾಂವ್ ವಿಜಯಸ್ತಂಭದ ಭಾವಚಿತ್ರವನ್ನು ಹೊತ್ತು ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಶಾಸಕ ಸಿಮೆಂಟ್ ಮಂಜು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಭಾವಚಿತ್ರ ತೆಗೆಸಿಕೊಂಡು ಡಿಜೆ ಸದ್ದಿಗೆ ಶಾಸಕರನ್ನು ಎತ್ತಿ ಕುಣಿದಾಡಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬೈರಮುಡಿ ಚಂದ್ರು, ಕಾಂಗ್ರೆಸ್ ಮುಖಂಡ ಮುರುಳಿಮೋಹನ್, ಸಮಿತಿ ಅಧ್ಯಕ್ಷ ಲಕ್ಷ್ಮಣ ಕೀರ್ತಿ, ಗೌರವ ಅಧ್ಯಕ್ಷ ನಲ್ಲುಳ್ಳಿ ಈರಪ್ಪ, ಹೆತ್ತೂರು ಅಣ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
The exploited society needs to wake up, said Siddharaju, state president of the State Buddhist Mahasabha.










