ಚನ್ನರಾಯಪಟ್ಟಣ: ಗ್ರಾಮಸ್ಥರ ಸಹಕಾರವಿದ್ದಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಮಸಕನಹಳ್ಳಿ ಗ್ರಾಮದಲ್ಲಿ ಲೆಕ್ಕ ಶೀರ್ಷಿಕೆ 2022-23 ನೇ ಸಾಲಿನ ವಿವೇಕ ಯೋಜನೆಯಡಿ 13.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಗ್ರಾಮಸ್ಥರ ಕರ್ತವ್ಯ ಎಂದರು.
ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಜೀವ ತುಂಬಬೇಕಿದೆ. ಶಾಲೆ ಎಂದರೆ ಮಕ್ಕಳ ಭವಿಷ್ಯ ರೂಪುಗೊಳ್ಳುವ ಕೇಂದ್ರವಾಗಿದೆ. ದೇಗುಲದ ಹಾಗೂ ಶಾಲೆಯ ಗಂಟೆ ಮೊಳಗಿದರೆ ಮಾತ್ರ ಗ್ರಾಮ ಪ್ರಗತಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ನಿರ್ವಹಿಸುವ ಬರದಲ್ಲಿ ಸರ್ಕಾರವು ಅಗತ್ಯ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಅನುದಾನಗಳ ಕೊರತೆ ಪರಿಣಾಮ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಲಭ್ಯವಾಗುವ ಅನುದಾನ ಬಳಕೆ ಮಾಡಿಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಮಾಜಿ ಅಧ್ಯಕ್ಷರಾದ ರಾಜಣ್ಣ, ಶಿವನಂಜೇಗೌಡ, ಬಿಳಿಕೆರೆ ರಂಗೇಗೌಡ, ಪೃಥ್ವಿ ಕುಮಾರ್, ಮಾಜಿ ಸದಸ್ಯ ಸುರೇಶ್, ಪ್ರಮುಖರಾದ ಕುಮಾರಸ್ವಾಮಿ, ಮಂಜುನಾಥ್, ನಿವೃತ್ತ ಉಪನ್ಯಾಸಕ ಶಿವರಾಜ್, ಪಿಡಿಒ ಕಿರಣ್, ಎಸ್ಪಿಎಂಸಿ ಅಧ್ಯಕ್ಷ ಆನಂದ್ ಕುಮಾರ್, ಮುಖ್ಯಶಿಕ್ಷಕಿ ಪ್ರೇಮ ಕುಮಾರಿ, ಸಹ ಶಿಕ್ಷಕರಾದ ಡಿ.ಆರ್.ನರಸಿಂಹಶೆಟ್ಟಿ, ವರಲಕ್ಷ್ಮೀ, ಎಸ್ಡಿಎಂಸಿ ಸದಸ್ಯರು, ಪಾಲಕರು ಹಾಗೂ ಇತರರು ಇದ್ದರು.










