ಬೆಂಗಳೂರು : ಸುದೀಪ್‌ ಪುತ್ರಿ ಸಾನ್ವಿ ಸ್ಯಾಂಡಲ್​ವುಡ್​ಗೆ ಎಂಟ್ರಿ ? ಮಗಳ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಸುದೀಪ್‌ ತಮ್ಮ ಮಧುರ ಕಂಠದಿಂದಲೇ ಈಗಾಗಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ವೇದಿಕೆಯಲ್ಲಿ “ಅಪ್ಪಾ ಐ ಲವ್ ಯೂ ಪಾ…” ಎಂದು ಹಾಡಿ ಎಲ್ಲರನ್ನೂ ಮೋಡಿ ಮಾಡಿದ್ದ ಸಾನ್ವಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದ್ದರು.

ಇದಷ್ಟೇ ಅಲ್ಲ, ಕೆಲ ತಿಂಗಳ ಹಿಂದೆ ಸಾನ್ವಿ ಸದ್ದಿಲ್ಲದೇ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವುದು ಕೂಡ ಗಮನ ಸೆಳೆದಿದೆ. ನಟಿಯಾಗಿ ಅಲ್ಲ, ಬದಲಾಗಿ ತಮ್ಮ ಕಂಠಸಿರಿಯನ್ನು ಅಸ್ತ್ರವಾಗಿಸಿಕೊಂಡು ಅವರು ತೆಲುಗು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದರಿಂದಾಗಿ ಸುದೀಪ್‌ ಅವರ ಮಗಳು ಸ್ಯಾಂಡಲ್‌ವುಡ್‌ಗೆ ಯಾವಾಗ ಬರುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಈ ಕುರಿತು ಯಶಸ್‌ಟಾಕೀಸ್‌ಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ಖಂಡಿತವಾಗಿಯೂ ಆಕೆ ಸಿನಿಮಾ ರಂಗಕ್ಕೆ ಬರಬಹುದು. ಅವಳಿಗೆ ನಟನೆಯ ಮೇಲೆ ಶೇಕಡಾ 100ರಷ್ಟು ಆಸಕ್ತಿ ಇದೆ. ಅವಳಿಗೆ ಮಾಡಬೇಕು ಎಂದು ಅನಿಸಿದರೆ, ಸರಿಯಾದ ಅವಕಾಶ ಸಿಕ್ಕು, ಅವಳು ಸ್ವತಃ ಫಿಲ್ಮ್ ಇಂಡಸ್ಟ್ರಿಗೆ ಬರಬೇಕು ಎಂದು ನಿರ್ಧರಿಸಿದರೆ ನಮ್ಮಿಂದ ಯಾವುದೇ ವಿರೋಧ ಇಲ್ಲ” ಎಂದು ಸುದೀಪ್ ಹೇಳಿದ್ದಾರೆ.

ಆದರೆ ಸದ್ಯಕ್ಕೆ ಈ ಬಗ್ಗೆ ಮನೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. “ಅವಳಿಗೆ ಅವಳದೇ ಆದ ಕನಸುಗಳು, ಆಸೆಗಳು ಇರುತ್ತವೆ. ನಾವು ಅವಳ ಕೈ ಹಿಡಿದು ಹೀಗೇ ಮಾಡು ಎಂದು ಒತ್ತಾಯಿಸಲು ಸಾಧ್ಯವಿಲ್ಲ. ಅಪ್ಪನಾಗಿ ನಾನು ಅವಳಿಗೆ ಬೆಂಬಲ ನೀಡುತ್ತೇನೆ ಅಷ್ಟೇ” ಎಂದು ಹೇಳಿದರು.

ಇನ್ನೂ ಮಾತನಾಡಿದ ಕಿಚ್ಚ, “ಅವಳ ಜೀವನವನ್ನು ಅವಳೇ ನಡೆಸಬೇಕು, ಅವಳೇ ಬೀಳಬೇಕು, ಅವಳೇ ಏಳಬೇಕು. ಆದರೆ ಅವಳ ಬೆನ್ನ ಹಿಂದೆ ನಾವು ಇದ್ದೇವೆ ಎನ್ನುವ ಭರವಸೆ ಮಾತ್ರ ಅವಳಿಗೆ ಇರಬೇಕು. ಏನಾದರೂ ತಪ್ಪಾದರೆ ನಾವು ಅವಳ ಜೊತೆಯಲ್ಲೇ ಇರುತ್ತೇವೆ. ಅವಳನ್ನು ಒಬ್ಬ ಹುಡುಗಿಯಾಗಿ, ನನ್ನ ಮಗಳಾಗಿ ಮಾನಸಿಕವಾಗಿ ಸ್ಟ್ರಾಂಗ್ ಮಾಡಬೇಕು. ಆದರೆ ನಮ್ಮ ಮೇಲೆಯೇ ಅವಳು ಅವಲಂಬಿತಳಾಗಿರಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಅವಳಿಗೆ ಏನು ಇಷ್ಟವೋ ಅದನ್ನು ಮಾಡಲಿ, ನಾವು ಬೆಂಬಲವಾಗಿ ನಿಂತಿರುತ್ತೇವೆ” ಎಂದು ಸುದೀಪ್ ಮನದಾಳದ ಮಾತು ಹಂಚಿಕೊಂಡಿದ್ದಾರೆ.