ಬೆಂಗಳೂರು: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES) ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
ಹಿರಿಯ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಕಾಶ್ ರಾಜ್ ಅವರನ್ನು ಈ ಬಾರಿಯ ಚಲನಚಿತ್ರೋತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ.
ಈ ಬಾರಿಯ ಚಲನಚಿತ್ರೋತ್ಸವಕ್ಕೆ “ಮಹಿಳಾ ಸಬಲೀಕರಣ” ಥೀಮ್ ಆಯ್ಕೆ ಮಾಡಲಾಗಿದೆ. ರಾಜಾಜಿನಗರದ ಲುಲು ಮಾಲ್ನಲ್ಲಿರುವ ಸಿನಿ ಪೊಲೀಸ್ 11 ಪರದೆಗಳಲ್ಲಿ ಪ್ರಮುಖವಾಗಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನ ಏರ್ಪಡಿಸಲಾಗಿದೆ.
ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಮೂರು ವಿಭಾಗಗಳಿಗೆ ಈಗಾಗಲೇ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಕೊನೆಯ ದಿನಾಂಕವಾಗಿದೆ.
ಈ ಬಾರಿಯ ಚಿತ್ರೋತ್ಸವದಲ್ಲಿ ಕನ್ನಡ ಹಾಗೂ ಭಾರತೀಯ ಚಿತ್ರಗಳು ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಚಲನಚಿತ್ರಗಳ 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ಕಾನ್ಸ್, ಬರ್ಲಿನ್, ವೆನಿಸ್, ಕಾರ್ಲೋವಿ ವೇರಿ, ಲೊಕಾರ್ನೋ, ರಾಟರ್ಡ್ಯಾಮ್, ಬೂಸಾನ್ ಹಾಗೂ ಟೊರಂಟೋ ಸೇರಿದಂತೆ ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದ ಅತ್ಯುತ್ತಮ ಚಿತ್ರಗಳು ಒಂದೇ ವೇದಿಕೆಯಲ್ಲಿ ಸಿನಿಮಾ ಪ್ರೇಮಿಗಳಿಗೆ ಲಭ್ಯವಾಗಲಿವೆ. ಜೊತೆಗೆ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶಗಳ ಆಯ್ದ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ.
ಪೋಲಿಷ್ ಕಲ್ಚರಲ್ ಸೆಂಟರ್, ಗೋಥೆ ಇನ್ಸ್ಟಿಟ್ಯೂಟ್–ಮ್ಯಾಕ್ಸ್ ಮುಲ್ಲರ್ ಭವನ, ಅಲಿಯಾನ್ಸ್ ಫ್ರಾಂಸೇ, ಫ್ರೆಂಚ್ ಇನ್ಸ್ಟಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್ ಸಹಯೋಗದಲ್ಲಿ ಆಯಾ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಚರಲ್ ಸೆಂಟರ್ ಸಹಯೋಗದಲ್ಲಿ ಪೊಲೆಂಡ್ನ ಖ್ಯಾತ ನಿರ್ದೇಶಕ ಅಂದ್ರೇಜ್ ವಾಜ್ದಾ ಅವರ ಶತಮಾನೋತ್ಸವದ ಅಂಗವಾಗಿ ಅವರ ಆಯ್ದ ಚಿತ್ರಗಳ ವಿಶೇಷ ಪುನರ್ದರ್ಶನವೂ ನಡೆಯಲಿದೆ. ಅಲ್ಲದೆ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಿತ್ರಗಳ ಸರಣಿಯೂ ಆಯೋಜಿಸಲಾಗಿದೆ.
ಚಿತ್ರೋತ್ಸವದ ಪ್ರಧಾನ ಕೇಂದ್ರದಲ್ಲಿ ಫಿಲಂ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ವಿಶೇಷ ವೇದಿಕೆ ಕಲ್ಪಿಸಲಾಗಿದ್ದು, ಅದೇ ಆವರಣದಲ್ಲಿ ಕನ್ನಡ ಚಿತ್ರರಂಗದ 91 ವರ್ಷಗಳ ಸ್ಮರಣೀಯ ಇತಿಹಾಸವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನವೂ ಇರಲಿದೆ.
2025–26ನೇ ಸಾಲಿನಲ್ಲಿ 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರೂ.7 ಕೋಟಿ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
The Chief Minister said that the International Film Festival (BIFFES) will be held from January 29 to February 6.










