ಅರಸೀಕೆರೆ: ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ವಿಜೃಂಭಣೆಯ ಎಳ್ಳು ಅಮಾವಾಸ್ಯೆ ಪೂಜೆ

ಅರಸೀಕೆರೆ: ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಎಳ್ಳು ಅಮಾವಾಸ್ಯೆ ಪೂಜೆಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಶ್ರದ್ಧಾ–ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಮೂಗೂತಿ ಸುಂದರಿ ಗೌರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಬಾರಿ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಪೂಜೆಯ ಅಂಗವಾಗಿ ದೇವಾಲಯವನ್ನು ತಳಿರು–ತೋರಣ, ಬಾಳೆಕಂದುಗಳಿಂದ ಅಲಂಕರಿಸಲಾಗಿದ್ದು, ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು.

ಮುಂಜಾನೆ ಧನುರ್ಮಾಸ ಹಾಗೂ ಅಮಾವಾಸ್ಯೆ ಪೂಜೆಯ ನಿಮಿತ್ತ ಗೌರಮ್ಮ ದೇವಿಗೆ ಕುಂಕುಮಾರ್ಚನೆ ನೆರವೇರಿಸಲಾಯಿತು. ಇದೇ ವೇಳೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಮಹಾತಪಸ್ವಿ ಲಿಂಗೈಕ್ಯ ಶಿವಲಿಂಗಜ್ಜಯ್ಯ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆಗಳನ್ನು ಪುರೋಹಿತರ ಮೂಲಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ಮತ್ತು ಕರ್ಪೂರಾರತಿ ಸಲ್ಲಿಸಲಾಯಿತು. ನಂತರ ಭಕ್ತಾದಿಗಳಿಗೆ ಎಂಪಿ ಶಿವಲಿಂಗಪ್ಪ ಮತ್ತು ಕುಟುಂಬದವರ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಡಾಳು ಸೇರಿದಂತೆ ಕೊಪ್ಪಲು, ಸೀತಾಪುರ, ಯರೇಹಳ್ಳಿ, ವೈಜಿಹಳ್ಳಿ, ಡಿ.ಎಂ.ಕುರ್ಕೆ, ಶಶಿವಾಳ, ರಾಂಪುರ, ಸೊಪ್ಪಿನಹಳ್ಳಿ, ಪಿ.ಹೊಸಹಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಶಂಕರನಹಳ್ಳಿ, ಮದ್ದರಹಳ್ಳಿ, ಕಡಲಮಗೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.

Arasikere: The ellu amavasye Puja was performed with great devotion and devotion on Friday evening in the presence of hundreds of devotees at the historic and famous holy site of Moolasthan Sri Swarna Gouramma Devi Temple in Madalu village.