ಶ್ರೀಲಂಕಾ ಪ್ರವಾಸೋದ್ಯಮ ಈಗ ಸುರಕ್ಷಿತ: ಪ್ರವಾಸಿಗರಿಗೆ ದ್ವೀಪ ರಾಷ್ಟ್ರದ ಸಚಿವರಿಂದ ಅಭಯ

ಮುಂಬೈ:ಇತ್ತೀಚಿನ ಚಂಡಮಾರುತದ ಅಬ್ಬರದ ನಂತರ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದೆ. ಭಾರತೀಯ ಪ್ರವಾಸಿಗರು ಯಾವುದೇ ಹಿಂಜರಿಕೆ ಇಲ್ಲದೇ ದ್ವೀಪ ರಾಷ್ಟ್ರದಲ್ಲಿ ವಿರಾಮದ ಸಮಯವನ್ನು ಕಳೆಯಬಹುದು ಎಂದು ಶ್ರೀಲಂಕಾದ ಪ್ರವಾಸೋದ್ಯಮ ಉಪ ಸಚಿವ ಪ್ರೊ.ರುವನ್ ರಣಸಿಂಘೆ ತಿಳಿಸಿದ್ದಾರೆ.

ಈ ಕುರಿತು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಲ್ಲೇ ಅತ್ಯಂತ ಪ್ರಬಲವಾದ ಚಂಡ ಮಾರುತ ಶ್ರೀಲಂಕಾಗೆ ಅಪ್ಪಳಿಸಿತ್ತು. ಆದರೆ, ಸರ್ಕಾರದಿಂದ ಅಷ್ಟೇ ಶರವೇಗದ ರಕ್ಷಣಾ ಕಾರ್ಯಾಚರಣೆ ಮತ್ತು ಮರು ನಿರ್ಮಾಣ ಕಾರ್ಯದಿಂದ ಶ್ರೀಲಂಕಾ ಬಹುತೇಕ ಸಹಜ ಸ್ಥಿತಿಗೆ ಮರಳಿದೆ ಎಂದರು.

ಶ್ರೀಲಂಕಾದ ಕ್ಲಾಸ್ ಎ ಮತ್ತು ಕ್ಲಾಸ್ ಬಿ ರಸ್ತೆಗಳು ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿವೆ. ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ಕೊಲಂಬೋ- ನುವಾರ -ಎಲಿಯಾ ಮತ್ತು ಬದುಲ್ಲಾ- ಮಹಿಯಾಂಗನ್ಯಾ ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಕೆಲವು ಒಳ ರಸ್ತೆಗಳು ಮಾತ್ರ ಹಾನಿಯಾಗಿದ್ದವು ಎಂದು ಅವರು ತಿಳಿಸಿದರು.

ಪ್ರವಾಹದಿಂದ ಜಲಾವೃತವಾಗಿದ್ದ ಮಹಿಯಾಂಗನ್ಯಾ ಆಸ್ಪತ್ರೆಯನ್ನು ಕೇವಲ 60 ತಾಸುಗಳಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ತುರ್ತು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಉದ್ದೇಶದಿಂದ ಹೊರತು ಬೇರಾವುದೇ ಸಮಸ್ಯೆಗಳು ಆಗಿರಲಿಲ್ಲ. ಈ ಅವಧಿಯಲ್ಲಿ ಯಾವೊಬ್ಬ ವಿದೇಶಿ ಪ್ರವಾಸಿಗರಿಗೂ ತೊಂದರೆ ಆಗಿಲ್ಲ ಎಂದು ರಣಸಿಂಘೆ ಮಾಹಿತಿ ಹಂಚಿಕೊಂಡರು.

ಪ್ರವಾಸಿ ತಾಣಗಳನ್ನು ಪುನರಾರಂಭಿಸಲಾಗಿದೆ. ಸಾಂಸ್ಕೃತಿಕ ತ್ರಿಕೋನಗಳಾದ ಯಾಲಾ, ಎಲ್ಲಾ, ನುವಾರ ಎಲಿಯಾ ಮತ್ತು ದಕ್ಷಿಣ ಕರಾವಳಿ ಪ್ರದೇಶಗಳು ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿವೆ. ವನ್ಯಜೀವಿ ಉದ್ಯಾನವನಗಳು ಮತ್ತು ಪಾರಂಪರಿಕ ತಾಣಗಳನ್ನು ಮರುಪರಿಶೀಲಿಸಿ ತೆರೆಯಲಾಗಿದೆ.

ಚಂಡಮಾರುತದ ನಂತರವೂ ಪ್ರವಾಸಿಗರ ಆಗಮನ ಸ್ಥಿರವಾಗಿದೆ. ಇತ್ತೀಚೆಗಷ್ಟೇ 2,000ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಕ್ರೂಸ್ ಹಡಗು ಶ್ರೀಲಂಕಾ ಬಂದರಿಗೆ ಯಶಸ್ವಿಯಾಗಿ ಆಗಮಿಸಿದೆ. ಪ್ರವಾಸೋದ್ಯಮ ತುರ್ತು ಸಹಾಯವಾಣಿ (1912) ಮೂಲಕ ಎಲ್ಲಾ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗುತ್ತಿದೆ.

ಶ್ರೀಲಂಕಾದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾಗಿರುವ ಪ್ರವಾಸೋದ್ಯಮವು ಈಗ ಚೇತರಿಸಿಕೊಂಡಿದ್ದು, ಪ್ರವಾಸಿಗರು ಯಾವುದೇ ಭಯವಿಲ್ಲದೆ ಭೇಟಿ ನೀಡಬಹುದು ಎಂದು ಶ್ರೀಲಂಕಾದ ಸಚಿವರು ಮನವಿ ಮಾಡಿದ್ದಾರೆ.

Mumbai: Sri Lanka’s tourism sector has completely returned to normal after the recent cyclone. Indian tourists can enjoy their leisure time in the island nation without any hesitation, said Sri Lanka’s Deputy Minister of Tourism Prof. Ruwan Ranasinghe.