ಚನ್ನರಾಯಪಟ್ಟಣ: ಬೆಳಗಾವಿ ಅಧಿವೇಶನಕ್ಕೆ ತೆರಳುವ ವೇಳೆ ಸಚಿವ ದಿನೇಶ್ ಗುಂಡೂರಾವ್ ಭೇಟಿ – ಕ್ಷೇತ್ರದ ಆರೋಗ್ಯ ಸೌಲಭ್ಯಗಳಿಗೆ ಅನುದಾನ ಕೋರಿದ ಶಾಸಕ ಸಿ.ಎನ್.ಬಾಲಕೃಷ್ಣ

MLA C.N. Balakrishna requested Health Minister Dinesh Gundu Rao, who made a surprise visit to him at the Bangalore airport while on his way to the Belgaum session, to provide a list of facilities required for the constituency.

ಚನ್ನರಾಯಪಟ್ಟಣ: ಬೆಳಗಾವಿ ಅಧಿವೇಶನಕ್ಕೆ ತೆರಳುತಿದ್ದ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಿಢೀರ್ ಭೇಟಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಕ್ಷೇತ್ರಕ್ಕೆ ಅಗತ್ಯವಿರುವ ಸೌಲಭ್ಯಗಳ ಪಟ್ಟಿಯನ್ನು ನೀಡಿ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು ಆರೋಗ್ಯ ಸಚಿವರೊಂದಿಗೆ ಮಾತನಾಡಿ, ತಾಲ್ಲೂಕಿನ ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತೊಬ್ಬ ವೈದ್ಯರ ಅಗತ್ಯವಿದ್ದು ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಡಬೇಕು ಎಂದು ಕೇಳಿಕೊಂಡರು.

ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವು ಶತಮಾನ ಕಂಡಿದೆ. ಆದರೆ ಕಟ್ಟಡವು ದುಸ್ಥಿತಿ ಹೊಂದಿದ್ದು ನವೀಕರಣಗೊಳಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಆದ್ದರಿಂದ 1.50 ಕೋಟಿ ರೂ. ಅನುದಾನ ಅಗತ್ಯವಿದೆ ಎಂದರು.

ವಿಶ್ವವಿಖ್ಯಾತಿ ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸಾ ಕೊಠಡಿಯ ಕೊರತೆ ಇದೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದ್ದು ಹೆಚ್ಚಿನ ಅನುದಾನ ಕಲ್ಪಿಸಿದ್ದಲ್ಲಿ ಅಭಿವೃದ್ಧಿಗೊಳಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಅಲ್ಲದೆ ತಾಲ್ಲೂಕು ವ್ಯಾಪ್ತಿಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬೇಕಾಗಿದೆ ಎಂದರು ವಿವರಿಸಿದ ಶಾಸಕರು, ತಾಲ್ಲೂಕಿನ ಆರೋಗ್ಯ ಇಲಾಖೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಒಂದು ದೊಡ್ಡ ಪಟ್ಟಿಯನ್ನು ಸಚಿವರಿಗೆ ನೀಡಿದರು.

ಇದನ್ನು ಆಲಿಸಿದ ಶಾಸಕಿ ನಯನ ಮೋಟಮ್ಮ ಅವರು, ಏನ್ ಬಾಲಣ್ಣ ನೀವು ಬೆಳ್ ಬೆಳಗ್ಗೆನೇ ನಿಮ್ಮ ಕ್ಷೇತ್ರದ ಕೆಲಸಗಳನ್ನು ನೆನಪಲ್ಲಿ ಇಟ್ಕೊಂಡು ಪಟ್ಟಿಮಾಡಿ ಸಚಿವರಿಗೆ ಕೊಡುತ್ತಿದ್ದೀರಾ‌. ಎಲ್ಲಿಗೆ ಹೋದರೂ ತನ್ನ ಕ್ಷೇತ್ರದ ಕೆಲಸಗಳ ಬಗ್ಗೆ ಗಮನ ಹರಿಸಿ, ಯಾವುದೇ ಸರ್ಕಾರ ಇರಲಿ ಅಗತ್ಯ ಅನುದಾನ ತಗೊಂಡು ಹೋಗ್ತೀರ. ಯಾವಾಗ ನಿದ್ರೆ ಮಾಡ್ತೀರಾ ಬಾಲಣ್ಣ ಎಂದು ನಗೆಯ ಚಟಾಕಿ ಹಾರಿಸಿದರು.

ಕೊಡಲೇ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಾಲಣ್ಣ ಅವರು ದಿನದ 24 ಗಂಟೆ ಕಾಲ ರಾಜಕೀಯ ಮಾಡ್ತಾರೆ. ರಾಜಕೀಯ ಅನ್ನೋದಕ್ಕಿಂತ ಜನಸೇವೆ ಮಾಡ್ತಾರೆ ಬಿಡಿ. ಇವರ ಕಾಳಜಿಯನ್ನು ನಾವು ಮೆಚ್ಚಲೇಬೇಕು ಎಂದು ಸಂತಸ ವ್ಯಕ್ತ ಪಡಿಸಿದರು.

ಮತ್ತೆ ಮಾತು ಮುಂದುವರಿಸಿದ ಸಚಿವರು, ನೀವು ನೀಡಿರುವ ಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಅನುದಾನವನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಸಚಿವ ಗುಂಡೂರಾವ್ ಅವರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಧನ್ಯವಾದ ತಿಳಿಸಿದ್ದಾರೆ.

MLA C.N. Balakrishna requested Health Minister Dinesh Gundu Rao, who made a surprise visit to him at the Bangalore airport while on his way to the Belgaum session, to provide a list of facilities required for the constituency.