ಹಾಸನ: ಫುಟ್ ಬೋರ್ಡ್ ಹತ್ತುತ್ತಿರುವಾಗಲೇ ಚಲಿಸಿದ ಬಸ್: ಕೆಳಗೆ ಬಿದ್ದ ಬಾಲಕಿ ಸಾವು

ಹಾಸನ: ಹತ್ತುತ್ತಿರುವಾಗಲೇ ಬಸ್ ಚಲಿಸಿದ್ದರಿಂದ ಚಕ್ರದಡಿ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಅರಸೀಕೆರೆ ತಾಲ್ಲೂಕಿನ ಹೊಳಲ್ಕೆರೆ ಗೇಟ್‌ ಸಮೀಪ ಶನಿವಾರ ನಡೆದಿದೆ.

ಹೊಳಲ್ಕೆರೆಯ ರಮೇಶ್‌ ಹಾಗು ಯಮುನಾ ದಂಪತಿ ಪುತ್ರಿ ಭಾರ್ಗವಿ (4) ಮೃತ ದುರ್ದೈವಿ. ಯಮುನಾ ಅವರು ವೈದ್ಯರ ಭೇಟಿಗಾಗಿ ಪುತ್ರಿ ಜೊತೆಗೆ ಮೇಟಿಕುರ್ಕೆ ಆಸ್ಪತ್ರೆಗೆ ಹೊರಟಿದ್ದಾಗ ಘಟನೆ ನಡೆದಿದೆ.

ಜೆ.ಸಿ. ಪುರ ಕಡೆಯಿಂದ ಬಂದ ಬಸ್‌‍ ಹೊಳಲ್ಕೆರೆ ಗೇಟ್‌ ಸಮೀಪ ನಿಂತಿದ್ದು ಬಸ್‌‍ನ ಮೊದಲ ಬಾಗಿಲಿನಲ್ಲಿ ತಾಯಿ ಹಾಗು ಮಗಳು ಹತ್ತಲು ಮುಂದಾಗಿದ್ದಾರೆ. ಮಗು ಬಸ್‌‍ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿದ್ದರಿಂದ ಕೆಳಗೆ ಬಿದ್ದ ಬಾಲಕಿತ ತಲೆಯ ಮೇಲೆ ಚಕ್ರ ಹರಿದಿದೆ.

ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಥಮ ಚಿಕಿತ್ಸೆ ಕೊಡಿಸಿ ಅರಸೀಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಭಾರ್ಗವಿ ಮೃತಪಟ್ಟಿದ್ದಾಳೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hassan: A tragic incident took place on Saturday near Holalkere Gate in Arasikere taluk, where a girl died after being crushed under the wheels of a moving bus while she was boarding.