ಹಾಸನ: ಜಿಲ್ಲೆಯ ಇಬ್ಬರು ಯುವ ಪೊಲೀಸ್ ಅಧಿಕಾರಿಗಳು ಈಗ KSRP ಕಮಾಂಡೆಂಟ್ಸ್- ಕಠಿಣ ಪರಿಶ್ರಮದ ಮೂಲಕ ಉನ್ನತ ಹುದ್ದೆಗೇರಿದ ಯುವಕರು

ಹಾಸನ: ಜಿಲ್ಲೆಯ ಇಬ್ಬರು ಯುವ ಪೊಲೀಸ್ ಅಧಿಕಾರಿಗಳು ಕೆ.ಎಸ್.ಆರ್.ಪಿ. ಬೇಟಾಲಿಯನ್ ಗಳ ಕಮಾಂಡೆಂಟ್ ಗಳಾಗಿ ಬಡ್ತಿ ಹೊಂದಿದ್ದಾರೆ.

ಸಕಲೇಶಪುರ ತಾಲ್ಲೂಕು ಮಾವಿನಹಳ್ಳಿ ಗ್ರಾಮದ ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಅವರ ಪುತ್ರ ಎಂ.ಎ. ಶರತ್‌ ಮಂಗಳೂರಿನಲ್ಲಿ SDRF ಡೆಪ್ಯೂಟಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಚನ್ನರಾಯಪಟ್ಟಣ ತಾಲೂಕು ಹೊನ್ನಮಾರನಹಳ್ಳಿಯ ರಾಜೇಗೌಡ ಹಾಗೂ ರೋಹಿಣಿ ದಂಪತಿ ಪುತ್ರ ಆರ್.ಅರವಿಂದ್, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಡೆಪ್ಯುಟಿ‌‌ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಈಗ ರಾಜ್ಯ ಸರ್ಕಾರ ಇಬ್ಬರಿಗೂ ಮುಂಬಡ್ತಿ‌ ನೀಡಿದ್ದು, ಶರತ್ ಅವರು ಕೆ.ಎಸ್.ಆರ್.ಪಿ. 7ನೇ ಪಡೆಗೆ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರನ್ನು ಮುನಿರಾಬಾದ್ ನಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ/ ಕಮಾಂಡೆಂಟ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಅರವಿಂದ್ ಅವರು 1ನೇ ಪಡೆಯ ಕಮಾಂಡೆಂಟ್ ಆಗಿ ಬಡ್ತಿ ಹೊಂದಿದ್ದಾರೆ. ಅವರನ್ನು ಮುನಿರಾಬಾದ್ ನ ಐ.ಆರ್.ಬಿ.ಯ ಕಮಾಂಡೆಂಟ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ಈ ಇಬ್ಬರು ಯುವ ಅಧಿಕಾರಿಗಳು ನಕ್ಸಲ್ ಹಾವಳಿ ಪೀಡಿತ ಛತ್ತಿಸ್ ಗಢ, ಗ್ಯಾಂಗ್ ಸ್ಟರ್ ಗಳ ಹಾವಳಿಯಿರುವ ಉತ್ತರ ಪ್ರದೇಶ, ನೇಪಾಳ‌ ಗಡಿಭಾಗಗಳಲ್ಲಿ ಚುನಾವಣಾ ಕರ್ತವ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿ ಬಂದಿರುವ ಅನುಭವ ಹೊಂದಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಉನ್ನತ ಹುದ್ದೆಗೆ ಏರುವ ಮೂಲಕ ಅವರು ಸಮಾಜಕ್ಕೆ ಮಾದರಿಯೂ ಆಗಿದ್ದಾರೆ.

Hassan: Two young police officers from the district have been promoted to the commandants of KSRP battalions.