ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್

This order has given a boost to the central government's Pradhan Mantri Bharatiya Janaushadhi Yojana, which provides quality generic medicines to the poor at low prices.

ಬೆಂಗಳೂರು: ಕರ್ನಾಟಕ ಹೈಕೋರ್ಟ್‍ನ ಧಾರವಾಡ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಮೇ 14, 2025ರ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಈ ಆದೇಶವು ಬಡವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಗೆ ಬಲ ನೀಡಿದೆ.

ಹಾವೇರಿ ಜಿಲ್ಲೆಯ ಕುಸನೂರಿನ ಎಂ. ರಾಕೇಶ್ ಸೇರಿದಂತೆ 34ಕ್ಕೂ ಹೆಚ್ಚು ಜನೌಷಧಿ ಕೇಂದ್ರ ಮಾಲೀಕರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತು. ಅರ್ಜಿದಾರರ ಪರ ವಾದಿಸಿದ ವಕೀಲ ಅನಿರುದ್ಧ ಎ. ಕುಲಕರ್ಣಿ ಅವರು, ಈ ಕೇಂದ್ರಗಳು ಬಡವರು, ಹಿರಿಯ ನಾಗರಿಕರು, ದಿನಗೂಲಿ ಕಾರ್ಮಿಕರು ಮತ್ತು ದೀರ್ಘಕಾಲಿಕ ರೋಗಿಗಳಿಗೆ 50-90% ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಒದಗಿಸುತ್ತವೆ ಎಂದು ವಾದಿಸಿದರು.

ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಜೆ.ಎಂ. ಗಂಗಾಧರ್ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿರುವುದರಿಂದ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು. ಆದರೆ ನ್ಯಾಯಪೀಠವು ಈ ವಾದವನ್ನು ತೀವ್ರವಾಗಿ ಖಂಡಿಸಿತು.

“ಬಡವರಿಗೆ ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ಔಷಧ ನೀಡುವುದರಲ್ಲಿ ಸರ್ಕಾರದ ಒಂದು ಭಾಗ ಮತ್ತೊಂದು ಭಾಗಕ್ಕೆ ಅಡ್ಡಿಪಡಿಸುವಂತಿಲ್ಲ. ಮಹಿಳೆಯರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲು ಯಾರು ಕೇಳಿದ್ದರು? ಜನೌಷಧಿ ಕೇಂದ್ರಗಳನ್ನು ಮುಚ್ಚಲು ಯಾರಾದರೂ ದೂರು ನೀಡಿದ್ದಾರಾ? ಕ್ಯಾನ್ಸರ್ ಔಷಧಗಳಂತಹ ದುಬಾರಿ ಔಷಧಗಳಿಗೆ ಸಬ್ಸಿಡಿ ನೀಡುವುದು ಜನಕಲ್ಯಾಣಕ್ಕಾಗಿಯೇ. ರಾಜ್ಯವಾಗಲಿ ಕೇಂದ್ರವಾಗಲಿ ಜನಕಲ್ಯಾಣ ಯೋಜನೆಗಳಲ್ಲಿ ಸಣ್ಣತನ ಬೇಡ. ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತಗೊಳಿಸಬೇಕು, ಬದಲಿಗೆ ಬಸ್ ಉಚಿತ, ಇದು ಉಚಿತ ಎಂದು ಎಲ್ಲವನ್ನೂ ಉಚಿತ ಮಾಡುವ ಯೋಚನೆಯಲ್ಲಿದ್ದೀರಾ?” ಎಂದು ನ್ಯಾಯಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

“ಪ್ರಧಾನಮಂತ್ರಿಗಳ ಹೆಸರಿನಲ್ಲಿ ಯೋಜನೆ ಇದೆ ಎಂಬ ಏಕೈಕ ಕಾರಣಕ್ಕೆ ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆಗಳಿಂದ ತೆಗೆದುಹಾಕುತ್ತಿದ್ದೀರಾ? ಸರ್ಕಾರಿ ನೌಕರರ ಸಂಬಳಕ್ಕೆ ಹಣವಿಲ್ಲದಂತಾಗಿದೆ. ಕೇಂದ್ರದ ಜನಕಲ್ಯಾಣ ಯೋಜನೆಗಳಲ್ಲಿ ರಾಜಕೀಯ ಮಾಡಬೇಡಿ” ಎಂದು ನ್ಯಾಯಪೀಠವು ಆಕ್ಷೇಪ ವ್ಯಕ್ತಪಡಿಸಿತು.

ಈ ತೀರ್ಪು ಬೆಂಗಳೂರು ಮತ್ತು ಕಲಬುರಗಿ ಪೀಠಗಳಲ್ಲಿ ದಾಖಲಾಗಿದ್ದ ಸಮಾನ ಅರ್ಜಿಗಳನ್ನು ನಿರರ್ಥಕಗೊಳಿಸಿದೆ. ಬಿಜೆಪಿ ನಾಯಕರು ಈ ತೀರ್ಪನ್ನು ಸ್ವಾಗತಿಸಿದ್ದು, ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

This order has given a boost to the central government's Pradhan Mantri Bharatiya Janaushadhi Yojana, which provides quality generic medicines to the poor at low prices.