ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಅಪಾಯದ ಅಂಚಿನಲ್ಲಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಹಿರೀಸಾವೆ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವು 30 ಬೆಡ್ ಗಳನ್ನು ಹೊಂದಿದ್ದು ಮೂವರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 350 ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆಂದು ಭೇಟಿ ನೀಡುತ್ತಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರವನ್ನು ಮಾ.13, 1925 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದಿವಾನರಾದ ಮಿರ್ ಹುಮ್ಝಾ ಹುಸ್ಸೇನ್ ಅವರು ಲೋಕಾರ್ಪಣೆಗೊಳಿಸಿದ್ದು ಇಂದಿಗೆ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಕಂಡಿದೆ. ಆದರೆ ಕಟ್ಟಡ ದುಸ್ಥಿತಿಗೊಂಡಿದ್ದು ಅಗತ್ಯ ಸೌಲಭ್ಯಗಳಿಲ್ಲದೆ ಆಸ್ಪತ್ರೆಯು ನರಳುತ್ತಿದೆ.
ನೂರು ವರ್ಷಗಳ ಹಿಂದೆ ಮಣ್ಣಿನ ಅಂಚುಗಳ ಅಳವಡಿಕೆಯೊಂದಿಗೆ ಆರೋಗ್ಯ ಕೇಂದ್ರದ ಕಟ್ಟಡವು ನಿರ್ಮಾಣಗೊಂಡಿದ್ದು ಇತ್ತಿಚಿನ ವರ್ಷಗಳಲ್ಲಿ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಛಾವಣಿಯ ಮರಮುಟ್ಟುಗಳು ಗೆದ್ದಲು ಹಿಡಿದಿದ್ದು ಸಂಪೂರ್ಣ ದುಸ್ತಿರ ಹೊಂದಿದೆ. ನಂತರದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ಕಟ್ಟಡಗಳು ಸಹ ಶಿಥಿಲಾವಸ್ಥೆ ತಲುಪಿವೆ.
ಗೋಡೆ ಅಲ್ಲಲ್ಲಿ ಬಿರುಕು ಬಿಡುವುದರ ಜೊತೆಗೆ ಮೇಲ್ಚಾವಣಿಯ ಸಿಮೆಂಟ್ ಉದುರುತ್ತಿದ್ದು ಕಬ್ಬಿಣದ ಕಂಬಿಗಳು ಕಾಣಿಸುತ್ತಿವೆ. ಇಂತಹ ಅಪಾಯದ ಕೆಳಗಡೆ ರೋಗಿಗಳು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮೂವರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೂ ಒಂದು ವೈದ್ಯರ ಹುದ್ದೆ ಖಾಲಿ ಇದೆ. ಅಪಘಾತ ಹಾಗೂ ತುರ್ತು ಚಿಕಿತ್ಸೆ ಎದುರಾದ ಸಂದರ್ಭದಲ್ಲಿ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳಿಲ್ಲದ ಪರಿಣಾಮ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆ ಇಲ್ಲವೇ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ಶವಗಾರದ ಕಟ್ಟಡವು ಸಂಪೂರ್ಣ ಹಾಳಾಗಿದ್ದು ಗೋಡೆಗಳು ಶಿಥಿಲಾವಸ್ಥೆ ತಲುಪಿವೆ. ಕಟ್ಟಡದ ಕಿಟಕಿಯ ಸಜ್ಜಾ ಹಾಗೂ ಮೇಲ್ಭಾಗದ ಕಾಂಕ್ರೀಟ್ ಛಾವಣಿಯ ಮೇಲೆ ಗಿಡಗಂಟೆಗಳು ಬೆಳೆದು ನಿಂತಿವೆ. ಅದರ ಕೆಳಗಡೆಯೇ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಬೇಕಿದೆ.
ಉಳಿದಂತೆ ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಿರುವ ಆಸ್ಪತ್ರೆಯ ಕಟ್ಟಡಗಳು ಹಾಳಾಗಿದ್ದು ಕಿಟಕಿಗಳ ಭಾಗದಲ್ಲಿ ಕಾಂಕ್ರೀಟ್ ಉದುರುತ್ತಿದೆ. ಅಲ್ಲದೆ ಆಸ್ಪತ್ರೆಯ ಕಟ್ಟಡವು ಪ್ರತ್ಯೇಕ ಕಾಲಘಟ್ಟಗಳಲ್ಲಿ ನಿರ್ಮಾಣಗೊಂಡಿದ್ದು ಹಳೆ ಕಟ್ಟಡದ ಜೊತೆಗೆ ಹೊಸ ಕಟ್ಟಡಗಳೂ ಹಾಳಾಗಿರುವುದು ಆಶ್ಚರ್ಯದ ಜೊತೆಗೆ ಆತಂಕ ಮೂಡಿಸಿದೆ.
ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಎರಡು ಕಡೆ ಶೌಚಾಲಯಗಳಿದ್ದರೂ ಸ್ವಚ್ಚತೆಯ ಕೊರತೆ ಕಾಡುತ್ತಿದೆ. ಶೌಚಾಲಯದ ಗೋಡೆಗಳು ಹಾಳಾಗಿದ್ದು ಬಾಗಿಲುಗಳು ಹಾನಿಗೊಳಗಾಗಿವೆ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ವೈದ್ಯರ ಕೊರತೆ:
ಆಸ್ಪತ್ರೆಯಲ್ಲಿ ಸದ್ಯಕ್ಕೆ ಮೂರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು ಒಂದು ಹುದ್ದೆ ಖಾಲಿ ಇದೆ. ಸಂಜೆ 5 ರ ನಂತರ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ.
ಗ್ರಾಮದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ವಾರದಲ್ಲಿ 2-3 ಅಪಘಾತಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಅಪಘಾತ, ಹೃದಯಾಘಾತ ಇಲ್ಲವೆ ಇತರೆ ಎಮರ್ಜೆನ್ಸಿ ಸಮಸ್ಯೆಯ ರೋಗಿಗಳನ್ನು ಕರೆತಂದರೆ ಇಲ್ಲಿ ಅಗತ್ಯ ಚಿಕಿತ್ಸೆ ಸಿಗುವುದಿಲ್ಲ. ಇನ್ನು ರಾತ್ರಿ ಸಮಯದಲ್ಲಿ ಕೇಳುವಂತಿಲ್ಲ.
ಚನ್ನರಾಯಪಟ್ಟಣ ಅಥವಾ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಇಂತಹ ಸಮಯದಲ್ಲಿ ಕೆಲವರು ಮಾರ್ಗಮಧ್ಯೆ ಸಾವನ್ನಪ್ಪಿರುವ ಸಾಕಷ್ಟು ಘಟನೆಗಳು ಸಂಭವಿಸಿವೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗಮನಹರಿಸಿ ಆಸ್ಪತ್ರೆಯ ನವೀಕರಣ ಹಾಗೂ ವೈದ್ಯರ ನೇಮಕಾತಿಯೊಂದಿಗೆ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಸಂಜೆಯ ನಂತರ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಇಲ್ಲಿ ಸಮಸ್ಯೆಗೆ ಕಾರಣವಾಗಿದೆ. ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇಂತಹ ಸಮಯದಲ್ಲಿ ಅಪಘಾತಕ್ಕೆ ಒಳಗಾದವರನ್ನು ಉಳಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡದ ನವೀಕರಣ ಹಾಗೂ ವೈದ್ಯರ ಕೊರತೆ ನೀಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.
ರವಿಕುಮಾರ್, ಸ್ಥಳೀಯರು, ಹಿರೀಸಾವೆ. ಸಮುದಾಯ ಆರೋಗ್ಯ ಕೇಂದ್ರದ ನವೀಕರಣಕ್ಕೆ ಒಂದುವರೆ ಕೋಟಿ ರೂ. ಅನುದಾನ ಅಗತ್ಯವಿದ್ದು ಸರ್ಕಾರದ ಗಮನ ಸೆಳೆದು ಅನುದಾನ ತರುವ ಮೂಲಕ ಅಗತ್ಯ ಸೌಲಭ್ಯಗಳೊಂದಿಗೆ ನವೀಕರಣ ಗೊಳಿಸಲಾಗುವುದು.
The Hirisawe Government Community Health Center building has reached a state of complete disrepair and is on the verge of collapse.










