ಹಾಸನ: ಹಾಸನದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಇಂದು ನಡೆಯಬೇಕಿದ್ದ ಸಭೆಗೆ ಕೊನೆಯ ಕ್ಷಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ತಡೆಯಾಜ್ಞೆ ಬಿದ್ದಿದೆ. ಇದರೊಂದಿಗೆ, ಸಂಸ್ಥೆಯ ಆಂತರಿಕ ಕದನ ಮತ್ತಷ್ಟು ಬಿಗಡಾಯಿಸಿದೆ.
ಸಂಸ್ಥೆಯ ನಿರ್ದೇಶಕ ಬಿ.ಆರ್. ಗುರುದೇವ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಮಲೆನಾಡು ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದ ಪ್ರತಿವಾದಿಗಳು ಡಿ. 04, 2025 ರಂದು ಹೊರಡಿಸಿದ್ದ ಸಭಾ ನೋಟಿಸ್ ಅನ್ನು ನ್ಯಾಯಾಲಯವು ತಕ್ಷಣವೇ ತಡೆಹಿಡಿದಿದೆ. ಈ ಆದೇಶದ ಮುಖ್ಯಾಂಶವೆಂದರೆ, ಡಿ. 11, 2025 ಕ್ಕೆ ನಿಗದಿಯಾಗಿದ್ದ ಕಾರ್ಯಕಾರಿ ಸಮಿತಿ ಸಭೆಯನ್ನು ರದ್ದುಪಡಿಸಲಾಗಿದೆ.
ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕವಾದ ಜ. 07, 2026 ರವರೆಗೆ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಅಥವಾ ಕಾರ್ಯಕಾರಿ ಸಮಿತಿ ಸಭೆಗಳನ್ನು ನಡೆಸದಂತೆ ಎರಡೂ ಪ್ರತಿವಾದಿಗಳಿಗೆ ಸ್ಪಷ್ಟ ನಿರ್ಬಂಧ ವಿಧಿಸಲಾಗಿದೆ.
ಸರ್ಕಾರಕ್ಕೆ ನೋಟಿಸ್:
ಅರ್ಜಿದಾರರಾದ ಬಿ.ಆರ್. ಗುರುದೇವ್ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯವು, ಈ ಮೊಕದ್ದಮೆಗೆ ರಾಜ್ಯ ಸರ್ಕಾರವನ್ನು (ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಮೂಲಕ) ಹೆಚ್ಚುವರಿ ಪ್ರತಿವಾದಿಯಾಗಿ ಸೇರಿಸಲು ಅನುಮತಿ ನೀಡಿದೆ. ಪ್ರಕರಣದ ತುರ್ತು ನೋಟಿಸ್ ಅನ್ನು ಪ್ರತಿವಾದಿಗಳಿಗೆ ಜಾರಿಗೊಳಿಸಲಾಗಿದ್ದು, ಮುಂದಿನ ವಿಚಾರಣೆ ಜ. 07, 2026 ರಂದು ನಡೆಯಲಿದೆ.
ಸಂಸ್ಥೆಯ ಪ್ರತಿಕ್ರಿಯೆ:
ಆಡಳಿತಾತ್ಮಕ ಕಾರ್ಯಗಳು ಮುಂದುವರಿಯುತ್ತವೆ” ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡಳ್ಳಿ ಅವರು ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಕರ್ನಾಟಕ ಹೈಕೋರ್ಟ್ ಕಾರ್ಯಕಾರಿ ಸಮಿತಿ ಸಭೆ ನಡೆಸದಂತೆ ಮಾತ್ರ ತಡೆಯಾಜ್ಞೆ ನೀಡಿದೆ. ಆಡಳಿತಾತ್ಮಕ ವಿಚಾರವಾಗಿ ಯಾವುದೇ ತಡೆಯಾಜ್ಞೆ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಹಾಸನದ ನ್ಯಾಯಾಲಯವು ಈಗಾಗಲೇ ನಮ್ಮ ಪರ ತೀರ್ಪು ನೀಡಿದ್ದು, ಆಡಳಿತಾತ್ಮಕ ವಿಚಾರದಲ್ಲಿ ಯಾವುದೇ ತೊಂದರೆ ನೀಡದಂತೆ ಎದುರಾಳಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಹಾಗಾಗಿ ನಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರೆಸುತ್ತೇವೆ” ಎಂದಿದ್ದಾರೆ.
ಜ. 07ರ ಮುಂದಿನ ಆದೇಶದವರೆಗೆ ಸಭೆ ನಡೆಸದಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಕೋರ್ಟ್ ಆದೇಶವನ್ನು ಗೌರವಪೂರ್ವಕವಾಗಿ ಸ್ವಾಗತಿಸುತ್ತಾ, ಕಾನೂನಾತ್ಮಕವಾಗಿಯೇ ಇದಕ್ಕೆ ಉತ್ತರ ನೀಡುತ್ತೇವೆ” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
The Karnataka High Court has issued a last-minute stay on the board meeting of the prestigious Malenadu Institute of Technical Education in Hassan, which was scheduled to be held today. With this, the internal battle within the institution has further escalated.










