6.9 C
Munich
Home News ಹಾಸನ: ನಾಯಕತ್ವ ಚರ್ಚೆ ಅನವಶ್ಯಕ ಡಿ.6 ರಂದು 250 ಕೋಟಿ ಯೋಜನೆಗೆ ಸಿಎಂ ಚಾಲನೆ- ಉಸ್ತುವಾರಿ...

ಹಾಸನ: ನಾಯಕತ್ವ ಚರ್ಚೆ ಅನವಶ್ಯಕ ಡಿ.6 ರಂದು 250 ಕೋಟಿ ಯೋಜನೆಗೆ ಸಿಎಂ ಚಾಲನೆ- ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

District in-charge Minister Krishna Byre Gowda expressed his displeasure that there is a lot of hype surrounding the leadership change. In my opinion, such a discussion is unnecessary.

ಹಾಸನ: ನಾಯಕತ್ವ ಬದಲಾವಣೆ ಸಂಬಂಧ ವಾಸ್ತವಕ್ಕಿಂತ ಮಿಗಿಲಾದ ಅತಿಶಯೋಕ್ತಿ ಚರ್ಚೆ ನಡೆಯುತ್ತಿವೆ. ನನ್ನ ಪ್ರಕಾರ ಈ ರೀತಿಯ ಚರ್ಚೆ ಅನವಶ್ಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಡಿ. 6 ರಂದು ನಗರಕ್ಕೆ ಸಿಎಂ ಭೇಟಿ ನೀಡಿ ಇಂದು ನಗರದಲ್ಲಿ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಈ ಚರ್ಚೆಯಿಂದ ಸಾವರ್ಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಇಂತಹ ಚರ್ಚೆಯಲ್ಲಿ ನಾನು ಹೆಚ್ಚು ಭಾಗವಹಿಸಲ್ಲ. ನಮ್ಮ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಬೇರೆಯವರು, ಮಾಧ್ಯಮದವರು ಮಾತಾನಾಡುವುದು ಅವರವರ ಸ್ವಾತಂತ್ರ್ಯ, ಸಾರ್ವಜನಿಕವಾಗಿ ಚರ್ಚೆ ಆಗುವುದನ್ನು ನಾನು ಸರಿ ತಪ್ಪು ಎಂದು ವಿಶ್ಲೇಷಣೆ ಮಾಡಲು ಹೋಗಲ್ಲ ಎಂದರು.

ನನಗೆ ಈಗ ಕೈ ತುಂಬಾ ಕೆಲಸ ಕೊಟ್ಟಿದ್ದಾರೆ. ಅದನ್ನು ಮಾಡುತ್ತೇನೆ. ಈಗ ಇರುವ ಕೆಲಸ ಮಾಡೋಣ, ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಸಾವರ್ಜನಿಕರಿಗೆ ಉಪಯೋಗವಿಲ್ಲದ ವಿಷಯದ ಬಗ್ಗೆ ನಾನು ಮಾತಾನಾಡಲು ಹೋಗಲ್ಲ. ನಮ್ಮ ನಾಯಕರು ಏನು ಹೇಳಿದ್ದಾರೆ. ಅದನ್ನು ಮಾಡಿಕೊಂಡು ಹೋಗುತ್ತಿದ್ದೇವೆ.

ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳ ಹೇಳಿಕೆ ನಾಯಕತ್ವ ಬದಲಾವಣೆಗೆ ಇಂಬು ನೀಡುತ್ತದೆ.

ಹಾಗಂತ ಕರ್ನಾಟಕದಲ್ಲಿ ಈ ವಿಷಯ ಬಿಟ್ಟರೆ ಬೇರೆ ಸಮಸ್ಯೆ ಇಲ್ವಾ, ಕ್ಷಣ ಕ್ಷಣಕ್ಕೂ ಚರ್ಚೆ ಮಾಡಲು ಇದೊಂದೇ ವಿಷಯವೇ, ಚರ್ಚೆ ಆಗುವುದನ್ನು ಬೇಡ ಎಂದು ಹೇಳುವುದಿಲ್ಲ.

ಸಾರ್ವಜನಿಕರಿಗೆ ಆಸಕ್ತಿ ಇರಬಹುದು, ಮಾಧ್ಯಮ ದವರಿಗೆ ಟಿಆರ್‌ಪಿ ಬರಬಹುದು, ಅದಕ್ಕೆಲ್ಲವೂ ಒಂದು ಮಿತಿ ಇದೆ. ನಾನು ಏನು ಇಲ್ಲ ಎಂದು ಹೇಳುವುದಿಲ್ಲ.

ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಬೆಳೆ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದ ರೈತರಿಗೆ 2251 ಕೋಟಿ ಬೆಳೆ ಪರಿಹಾರ ಒದಗಿಸಿಕೊಟ್ಟಿದ್ದೇವೆ ಎಂದ ಸಚಿವರು, ಅತಿವೃಷ್ಟಿಯಿಂದ ಮೂಲಸೌಕರ್ಯ ಹಾನಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕಿದೆ.

ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ನೀಡಬೇಕಿರುವುದು ಅವರ ಕರ್ತವ್ಯ. 1521 ಕೋಟಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದೇವೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಕರ್ನಾಟಕಕ್ಕೆ ಬರಬೇಕಾದ ಪರಿಹಾರ ಕೊಟ್ಟೇ ಕೊಡುತ್ತೇವೆ ಎಂದು ಜನತೆಗೆ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೆ 2023-24ರಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ, ಕೇಂದ್ರ ಪರಿಹಾರ ಕೊಡದಿದ್ದಾಗ ಸುಪ್ರೀಂ ಮೊರೆ ಹೋಗಿ ಪಡೆದುಕೊಂಡಿದ್ದೆವು. ಈ ಬಾರಿ ಹಾಗಾಗದು ಎಂದು ಕೊಂಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೆಕ್ಕೆಜೋಳ ಖರೀದಿಗೆ ಎಂಎಸ್‌ಪಿ ದರ ನಿಗದಿ ಮಾಡಿದರೂ ಬೆಂಬಲ ಬೆಲೆ ನೀಡುತ್ತಿಲ್ಲ. ಮೋದಿ ಕರ್ನಾಟಕಕ್ಕೆ ಬಂದು ನೂರೊಂದು ಸುಳ್ಳು ಹೇಳಿ ಹೋಗುತ್ತಾರೆ. ಎಂಎಸ್‌ಪಿ ಘೋಷಣೆ ಮಾಡಿರುವುದು ಕೇಂದ್ರ ಸರ್ಕಾರ ಅದನ್ನು ಅನುಷ್ಠಾನ ಮಾಡಬೇಕಿರುವುದೂ ಅವರೇ, ಮಾಡದಿದ್ದರೆ ನಾವು ಪ್ರಶ್ನೆ ಮಾಡಬೇಕು. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೆ ಬಿಜೆಪಿ ಸಂಸದರರೆಲ್ಲ ಕೈ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ.

ಕೆಲಸ ಆಗುತ್ತೋ, ಬಿಡುತ್ತೊ ಬೇರೆ ವಿಷಯ. ಅದರೆ ರಾಜ್ಯದ ಸಮಸ್ಯೆ ಬಗ್ಗೆ ದನಿ ಎತ್ತಬೇಕಿರುವುದು ಸಂಸದರ ಕೆಲಸ. ಇಲ್ಲಿ ನೆಪ ಮಾತ್ರಕ್ಕೆ ಬೀದಿಯಲ್ಲಿ ನಾಟಕ ಮಾಡುವುದ ಬಿಟ್ಟು ಕೇಂದ್ರದ ಬಳಿ ಬೆಂಬಲ ಬೆಲೆ ಮಂಜೂರು ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ನಾಟಕ ಮಾಡುವುದನ್ನು ಬಿಡಲಿ, ಜನರ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಿ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಚರ್ಚೆಯಾಗಲಿ ಎಂದರು.

ಹಾಸನ ಜಿಲ್ಲೆಯಲ್ಲಿ 15 ಸಾವಿರ ಜಮೀನು ಅಳತೆ ಮಾಡಿದ್ದೇವೆ. 24 ಸಾವಿರ ಮಂಜೂರಿದಾರ ರೈತರಿಗೆ ಪೋಡಿ ಮಾಡಿಕೊಡುವ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದೇವೆ. ಕಳೆದ 14 ವರ್ಷದಲ್ಲಿ ಜಿಲ್ಲೆಯಲ್ಲಿ ಕೇವಲ 2444 ರೈತರ ಜಮೀನು ಮಾತ್ರ ಮಾಡಿಕೊಡಲಾಗಿತ್ತು.2 ತಿಂಗಳಲ್ಲಿ 10 ಸಾವಿರ ಜಮೀನನ್ನು ಸರ್ವೆ ಮಾಡಿಕೊಡುತ್ತೇವೆ ಎಂದರು.

ಈ ವೇಳೆ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ, ಜಿ.ಪಂ. ಸಿಇಒ ಬಿ.ಆರ್. ಪುರ್ಣಿಮಾ ಹಾಗೂ ಅಧಿಕಾರಿಗಳಿದ್ದರು.

error: Content is protected !!