ರಾಮನಾಥಪುರ: ಹಾಸನ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಬುಧವಾರದಂದು ನಡೆದ ಇತಿಹಾಸ ಪ್ರಸಿದ್ಧ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದಲ್ಲಿ ಹಾಸನ ಲೋಕಸಭಾ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾದರು.
ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಈ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದರು, ಅಪಾರ ಭಕ್ತ ಸಮೂಹದೊಂದಿಗೆ ತೇರನ್ನು ಎಳೆಯುವ ಮೂಲಕ ತಮ್ಮ ಭಕ್ತಿಭಾವ ಮೆರೆದರು.
ಬುಧವಾರ ಮಧ್ಯಾಹ್ನ ವೇಳೆಗೆ ರಾಮನಾಥಪುರಕ್ಕೆ ಆಗಮಿಸಿದ ಸಂಸದ ಶ್ರೇಯಸ್, ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಸೇರಿದಂತೆ ಹಲವಾರು ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಚಂಪಾ ಷಷ್ಠಿಯ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಜರುಗಿದ ರಥೋತ್ಸವದಲ್ಲಿ ಪಾಲ್ಗೊಂಡ ಅವರು, ವಿಶೇಷ ಪೂಜೆ ಸಲ್ಲಿಸಿ, ನಂತರ ಪ್ರಸಾದವನ್ನು ಸ್ವೀಕರಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಚಂಪಾ ಷಷ್ಠಿ ದಿನದಂದು ನಡೆಯುವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವವು ಹಾಸನ ಜಿಲ್ಲೆಯ ಪ್ರಮುಖ ರಥೋತ್ಸವಗಳಲ್ಲಿ ಒಂದಾಗಿದೆ. ಇಂತಹ ಪವಿತ್ರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದು ತಮ್ಮ ಅದೃಷ್ಟ ಎಂದು ಬಣ್ಣಿಸಿದರು.
”ದೇವರು ನಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಮ್ಮ ನಾಡಿಗೆ ಸುಭಿಕ್ಷೆ ಉಂಟಾಗಲಿ ಎಂದು ಪ್ರಾರ್ಥಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಅನ್ನದಾತರಾದ ರೈತ ಬಾಂಧವರಿಗೆ ಅನುಕೂಲವಾಗಲಿ, ಅವರ ಕಷ್ಟಗಳು ದೂರವಾಗಿ ಸುಖ-ಸಮೃದ್ಧಿ ದೊರೆಯಲಿ ಎಂದು ಸುಬ್ರಹ್ಮಣ್ಯ ಸ್ವಾಮಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇನೆ,” ಎಂದು ಸಂಸದ ಶ್ರೇಯಸ್ ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಕುಕ್ಕೆ ಸುಬ್ರಹ್ಮಣ್ಯ ದೇಗುಲದಷ್ಟೇ ಮಹತ್ವ ಪಡೆದಿದ್ದು, ಇಲ್ಲಿನ ರಥೋತ್ಸವವು ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತದೆ.










