12.9 C
Munich
Home News ಹಾಸನ: ಮಾಜಿ ಸಚಿವ ಎ. ಮಂಜು ಕಿಡಿ: “ಕುರ್ಚಿ ವ್ಯಾಮೋಹದಿಂದ ರಾಜ್ಯದ ಅಭಿವೃದ್ಧಿ ಕುಂಠಿತ”

ಹಾಸನ: ಮಾಜಿ ಸಚಿವ ಎ. ಮಂಜು ಕಿಡಿ: “ಕುರ್ಚಿ ವ್ಯಾಮೋಹದಿಂದ ರಾಜ್ಯದ ಅಭಿವೃದ್ಧಿ ಕುಂಠಿತ”

ಹಾಸನ: ರಾಜ್ಯ ಕಾಂಗ್ರೆಸ್ ನಲ್ಲಿನ ಮುಖ್ಯಮಂತ್ರಿ ಪದವಿ ಗೊಂದಲದ ನಡುವೆಯೇ ಮಾಜಿ ಸಚಿವ ಎ. ಮಂಜು ಅವರು ಸರ್ಕಾರದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಯಾರು ಆಗ್ತಾರೆ ಎಂಬುದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯ. ಆದರೆ ಅಧಿಕಾರದಲ್ಲಿ ಇರುವವರು ಜನರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಆಡಳಿತ ನಡೆಸಬೇಕು,” ಎಂದರು.

ರಾಜ್ಯದ ಮೂಲಸೌಕರ್ಯ ಸ್ಥಿತಿಯನ್ನು ಟೀಕಿಸಿದ ಅವರು,“ರಸ್ತೆಗಳೆಲ್ಲಾ ಗುಂಡಿಬಿದ್ದಿವೆ, ಅವನ್ನು ಮುಚ್ಚುವ ಕೆಲಸವೇ ಆಗುತ್ತಿಲ್ಲ. ಕುರ್ಚಿ ವ್ಯಾಮೋಹದಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ,” ಎಂದು ಹೇಳಿದರು.

ಪಕ್ಷಾಂತರ ಮತ್ತು ಮಾತುಕತೆ ರಾಜಕೀಯದ ಬಗ್ಗೆ ಮಾತನಾಡಿದ ಅವರು:
ಹೈಕಮಾಂಡ್ ಮಟ್ಟಕ್ಕೆ ಚರ್ಚೆ ಹೋಗಿದ್ದು, ಶೀಘ್ರದಲ್ಲೇ ಸ್ಥಿತಿಗತಿಗೆ ತೆರೆ ಬೀಳಲಿದೆ. “ಮಾತು ಕೊಟ್ಟಿದ್ರೆ ಮಾತಿನಂತೆ ನಡೆಬೇಕು; ಇಲ್ಲವಾದರೆ ಇರುವವರನ್ನೇ ಮುಂದುವರಿಸಬೇಕು. ಏನಾದರೂ ಒಂದು ಇತ್ಯರ್ಥ ಮಾಡಬೇಕು,” ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ “ಕ್ರಾಂತಿ” ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಜು,“ನವೆಂಬರ್‌ನಲ್ಲೇ ಕ್ರಾಂತಿ ಆಗುತ್ತದೆ ಎಂದು ಅವರೇ ಮೊದಲು ಹೇಳಿಕೊಂಡಿದ್ದರು. ಈಗ ವಾಂತಿ ಬಂದರೂ ಒಳಗೇ ತಡೆದುಕೊಂಡಿದ್ದಾರೆ! ಯಾವಾಗ ಏನು ಆಗುತ್ತೋ ಗೊತ್ತಿಲ್ಲ. ಶೀಘ್ರದಲ್ಲೇ ನೂರಕ್ಕೆ ನೂರು ವಾಂತಿ ಆಗುತ್ತೆ, ಆಗ ಯಾರಿಗೆ ಯಾವ ಖಾಯಿಲೆ ಅಂದ್ರೇ ಗೊತ್ತಾಗುತ್ತೆ,” ಎಂದು ವ್ಯಂಗ್ಯವಾಡಿದರು.

ರಾಜ್ಯದ ಆಡಳಿತವನ್ನು ಮತ್ತೊಮ್ಮೆಯೂ ಟೀಕಿಸಿದ ಅವರು,“ಜನಪರವಾಗಿ ಸರ್ಕಾರ ನಿಲ್ಲಬೇಕು, ಆದರೆ ಈಗ ರಾಜ್ಯದಲ್ಲಿ ಅಭಿವೃದ್ಧಿಯೇ ಕುಂಠಿತವಾಗಿದೆ,” ಎಂದು ಆಕ್ಷೇಪಿಸಿದರು.

error: Content is protected !!