ಚನ್ನರಾಯಪಟ್ಟಣ: ಗೋವುಗಳಿಗೆ ಪೂಜೆ ಸಲ್ಲಿಸಿದರೆ ಮುಕ್ಕೋಟಿ ದೇವತೆಗಳ ದರ್ಶನ ಪಡೆದಷ್ಟೇ ಪುಣ್ಯ ಸಿಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಬೆಳಗ್ಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ, ಬಳಿಕ ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಆಧುನಿಕರಣ ಹೆಚ್ಚಿದಂತೆಲ್ಲ ಗೋವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮನೆಯಲ್ಲಿ ಗೋವುಗಳನ್ನು ಸಾಕಿ ಸಲುಹಿದರೆ ಗೃಹದಲ್ಲಿ ಲಕ್ಷ್ಮಿ ನೆಲೆಸಲಿದ್ದು ಬದುಕು ಶಾಂತಿ ಹಾಗೂ ನೆಮ್ಮದಿಯ ಗೂಡಾಗಲಿದೆ ಎಂದು ತಿಳಿಸಿದರು.
ಚುಂಚಶ್ರೀಗಳಿಗೆ ಪಾದಪೂಜೆ: ಶ್ರೀಕ್ಷೇತ್ರಕ್ಕೆ ಆಗಮಿಸಿದ ಚುಂಚಶ್ರೀ ಅವರನ್ನು ಮಂಗಳವಾದ್ಯದೊಂದಿಗೆ ಸ್ವಾಗತಿಸಿದ ಭಕ್ತರು ಪಾದಪೂಜೆ ನೆರವೇರಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಬಳಿ ಗೋಪೂಜೆ ನೆರವೇರಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಶ್ರೀ ರಂಗನಾಥಸ್ವಾಮಿ, ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇಗುಲದ ಮುಂಭಾಗದಲ್ಲಿ ರಥಕ್ಕೆ ನವಕಲಶಾರೋಹಣ ನೆರವೇರಿಸಿದರು.
ಶ್ರೀ ಕ್ಷೇತ್ರದ ಪ್ರಧಾನ ದೇವತೆ ಮೆಳೆಯಮ್ಮ, ಶ್ರೀ ರಂಗನಾಥಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಲಕ್ಷ್ಮೀದೇವಿ, ಶ್ರೀ ವಿಶ್ವನಾಥ, ಶ್ರೀ ಪಾರ್ವತಿ ಅಮ್ಮನವರು, ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಪರಿವಾರ ದೇವರುಗಳು ಮತ್ತು ಕ್ಷೇತ್ರದ ಹಿಂದಿನ ಪೀಠಾಧಿಪತಿಗಳ ಸ್ಮರಣೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಶ್ರೀಕ್ಷೇತ್ರ ದೇವತೆ ಆದಿಶಕ್ತಿ ಮೆಳೆಯಮ್ಮ ದೇವಿಗೆ ಶ್ರೀಗಳು ಪೂಜೆ ಸಲ್ಲಿಸಿ ದೇವಿಯ ಸನ್ನಿಧಾನದಲ್ಲಿ ಶ್ರೀ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ ನೆರವೇರಿಸಿದರು. ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸುಮಂಗಲಿಯರು ಲಲಿತ ಸಹಸ್ರನಾಮ, ಲಲಿತ ತ್ರಿಶತಿ, ಪಠಿಸಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಬೆಂಗಳೂರಿನ ಹುಳಿಮಾವು ಶಾಖಾ ಮಠದ ಶ್ರೀಶೈಲನಾಥಸ್ವಾಮೀಜಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನ.26 ರಂದು ಶ್ರೀ ಕ್ಷೇತ್ರದಲ್ಲಿ ಸಂಜೆ 4.30 ಗಂಟೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಯ ರಥೋತ್ಸವ ಹಾಗೂ ಸರ್ಪವಾಹನೋತ್ಸವ ಜರುಗಲಿದೆ. ಉಪವಾಸ ವ್ರತ ಆಚರಿಸುವ ಸುತ್ತಲಿನ ಗ್ರಾಮಸ್ಥರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವರು. ಅದೇ ದಿನ ಸಂಜೆ 6.30ಕ್ಕೆ ಆಯೋಜಿಸಿರುವ ಧಾರ್ಮಿಕ ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸುವರು. ನ.27 ರಂದು ಶ್ರೀ ರಂಗನಾಥಸ್ವಾಮಿಯ ರಥೋತ್ಸವ ಮತ್ತು ಗರುಡೋತ್ಸವ ನಡೆಯಲಿದೆ. ಮೂರು ದಿನ ನಿತ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ನ.28 ರಂದು ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರು ಪುಣ್ಯಾರಾಧನೆ ಹಾಗು ಗುರುಸಂಸ್ಮರಣೋತ್ಸವ ಏರ್ಪಡಿಸಲಾಗಿದೆ.










