ಕೋಲ್ಕತ್ತಾ : ಏರ್ ಇಂಡಿಯಾದ ಆಸ್ತಿ ದಾಖಲೆಗಳಲ್ಲಿ ಕಾಣಿಸದೇ ಮರೆಯಾಗಿದ್ದ 43 ವರ್ಷದ ಬೋಯಿಂಗ್ 737-200 ವಿಮಾನವೊಂದನ್ನು ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. 2012ರಿಂದ ವಿಮಾನ ನಿಲ್ದಾಣದ ದೂರದ ಭಾಗದಲ್ಲಿ ನಿಲ್ಲಿಸಲಾಗಿದ್ದ ಈ ವಿಮಾನದ ಅಸ್ತಿತ್ವದ ಬಗ್ಗೆ ಸಂಸ್ಥೆಗೆ ಸ್ಪಷ್ಟ ಮಾಹಿತಿ ಇರಲಿಲ್ಲವೆಂಬುದು ಘಟನೆಗೆ ವಿಶೇಷ ತಿರುವು ನೀಡಿದೆ.
ವಿಮಾನ ನಿಲ್ದಾಣ ಪ್ರಾಧಿಕಾರವು ಹಳೆಯ ವಿಮಾನ ತೆರವುಗೊಳಿಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಿದಾಗ ದಾಖಲೆ ಪರಿಶೀಲನೆಯ ವೇಳೆ ಈ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ. ರಿಜಿಸ್ಟ್ರೇಷನ್ ಸಂಖ್ಯೆ VT-EHH ಹೊಂದಿರುವ ಈ ವಿಮಾನವನ್ನು 1982ರಲ್ಲಿ ಆಗಿನ ಇಂಡಿಯನ್ ಏರ್‌ಲೈನ್ಸ್ ಖರೀದಿಸಿತ್ತು. ನಂತರ ಅಲಯನ್ಸ್ ಏರ್ ಮತ್ತು ಇಂಡಿಯಾ ಪೋಸ್ಟ್ ಸೇವೆಗಳಿಗೆ ಬಳಸಲಾಗಿದ್ದು, 2007ರಲ್ಲಿ ಇದನ್ನು ಸರಕು ಸಾಗಾಣಿಕೆ ವಿಮಾನವಾಗಿ ಪರಿವರ್ತಿಸಲಾಗಿತ್ತು.
2012ರಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸಿದ ಬಳಿಕ ಕೋಲ್ಕತ್ತಾದಲ್ಲಿ ನಿಲ್ಲಿಸಲಾಗಿದ್ದ ಈ ವಿಮಾನ, ಇಂಡಿಯನ್ ಏರ್‌ಲೈನ್ಸ್–ಏರ್ ಇಂಡಿಯಾ ವಿಲೀನ ಮತ್ತು 2022ರ ಖಾಸಗೀಕರಣದ ಗೊಂದಲಗಳಲ್ಲಿ ದಾಖಲೆಗಳಲ್ಲಿ ‘ಮರೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಘಟನೆಯನ್ನು “ಅತ್ಯಂತ ಅಪರೂಪದ ಮತ್ತು ಆಶ್ಚರ್ಯಕರ” ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಆಂತರಿಕ ಪತ್ರದಲ್ಲಿ ಹೇಳಿದ್ದಾರೆ. ಈಗಾಗಲೇ ವಿಮಾನವನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಖರೀದಿದಾರರ ವಿವರ ಬಹಿರಂಗಪಡಿಸಿಲ್ಲ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಆಸ್ತಿ ನಿರ್ವಹಣೆಯಲ್ಲಿ ಇರುವ ಗಂಭೀರ ವೈಫಲ್ಯ ಈ ಘಟನೆಯಿಂದ ಹೊರಬಂದಿದೆ ಎಂಬುದು ತಜ್ಞರ ಅಭಿಮತ. ಟಾಟಾ ಗುಂಪಿನ ನೇತೃತ್ವದಲ್ಲಿ ಏರ್ ಇಂಡಿಯಾ ಈಗ ತನ್ನ ಎಲ್ಲಾ ಆಸ್ತಿಗಳ ಸಂಪೂರ್ಣ ಆಡಿಟ್ ಕೈಗೊಂಡಿದ್ದು, “ಇನ್ನೂ ಇಂತಹ ಮರೆಯಾದ ಆಸ್ತಿಗಳಿವೆಯೇ?” ಎಂಬ ಪ್ರಶ್ನೆ ಸಂಸ್ಥೆಯೊಳಗೆ ಚರ್ಚೆಗೆ ಗ್ರಾಸವಾಗಿದೆ.










