ಅರಸೀಕೆರೆ: ನಗರದಲ್ಲಿ ಭಾನುವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮುನಿಸಿನಿಂದ ವೇದಿಕೆ ತೊರೆದಿದ್ದಾರೆ. ಶಿವಾನಂದ ಮಹಾಪುರಿ ಸ್ವಾಮೀಜಿ ಮಾಡಿದ ಟೀಕೆ ಗದ್ದಲಕ್ಕೆ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾನಂದ ಮಹಾಪುರಿ ಸ್ವಾಮೀಜಿ, ಶಾಸಕ ಶಿವಲಿಂಗೇಗೌಡರನ್ನುದ್ದೇಶಿಸಿ “ನಾಲ್ಕು ಬಾರಿ ಶಾಸಕರಾಗಿದ್ದರೂ, ಗಂಗೆ ಮಡು ಗಂಗಾಧರೇಶ್ವರ ದೇವಸ್ಥಾನಕ್ಕೆ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಮಾಡುತ್ತೇವೆಂದು ಹೇಳಿ ಸುಳ್ಳು ಭರವಸೆ ನೀಡಿದ್ದೀರಿ. ನಮ್ಮ ಸಮಾಜದ ಮತ ಪಡೆದು ಮತ್ತೆ ಮೋಸ ಮಾಡುತ್ತಿದ್ದೀರಿ,” ಎಂದು ಗರಂ ಆಗಿ ಹೇಳಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ಶಿವಲಿಂಗೇಗೌಡ, “ನನ್ನ ಬಳಿ ಯಾರೂ ರಸ್ತೆ ಬಗ್ಗೆ ಕೇಳಿಲ್ಲ. ನಾನು ಅಂತ ಹೇಳಿಲ್ಲ. ತಿಳಿಯದೇ ವೇದಿಕೆಯ ಮೇಲೆ ಹೀಗೆ ಮಾತನಾಡುವುದು ತಪ್ಪು,” ಎಂದರು. ಅಷ್ಟರಲ್ಲಿ ವೇದಿಕೆ ಮೇಲೆ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇದರ ನಡುವೆ ವೇದಿಕೆ ಹತ್ತಿದ ತಾಲೂಕು ಪಂಚಾಯಿತಿ ಸದಸ್ಯ ಮಂಗಳಾಪುರ ನಾಗರಾಜ್, “ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೇವೆ. ಎರಡು ಕೋಟಿ ರೂಪಾಯಿ ಅನುದಾನದ ಭರವಸೆ ನೀಡಿದ್ದಾರೆ,” ಎಂದರು. ಇದರಿಂದ ಸಿಟ್ಟಿಗೆದ್ದ ಶಾಸಕರು ಕಿಡಿಕಾರುತ್ತಾ,“ನೀನು ಯಾರು ಹೇಳಲು? ನಿಂದು ಇದೇ ಕೆಲಸ. ಅದಕ್ಕಾಗಿ ನಿಮ್ಮ ಸಹವಾಸಕ್ಕೆ ಬರುತ್ತಿಲ್ಲ,” ಎಂದು ಗದರಿಸಿದರು.
ಘಟನೆಯ ನಂತರ ಸ್ವಾಮೀಜಿಗೆ ಸನ್ಮಾನ ಮಾಡಿ ಶಾಸಕ ಕೆ.ಎಂ.ಶಿವಲಿಂಗೇಗೌಡ ವೇದಿಕೆ ತೊರೆದರು.










