ಸಕಲೇಶಪುರ :ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರಕ್ಕಾಗಿ ಚಟದಿಂದ ಮಾತನಾಡುವವರು ಇಂಥ ಹೇಳಿಕೆ ಕೊಡಲು ಸಾಧ್ಯ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಹೇಳಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶ ಸೇವೆ ನಿರಂತವಾಗಿ ಮಾಡುತ್ತ ನೂರು ವರ್ಷ ಪೂರೈಸಿದೆ.ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು, ಪಥಸಂಚಲನ, ಬೈಠಕ್ ಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಕರೆ ಕೊಟ್ಟಿರುವುದು ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ.
ಸಂಘವನ್ನು ನಿಷೇದ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್.ಎಸ್.ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸಚಿವರಾಗಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.
ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್.ಡಿ.ಪಿ.ಐ ನಂತ ದೇಶ ವಿರೋಧಿ ಸಂಘಟನೆಗಳನ್ನು ನಿಷೇದ ಮಾಡಲಿ. ಅನ್ಯ ಕೋಮಿನ ಹಬ್ಬಗಳಂದು ತಲ್ವಾರ್ ತೋರಿಸಿ ಬೀದಿಗಳಲ್ಲಿ ಓಡಾಡುವ ಪುಂಡರ ಹೆಡೆಮುರಿಕಟ್ಟಲಿ ಎಂದರು.
ಹಿಂದೆ ಎರಡು ಮೂರು ಬಾರಿ ಇದೇ ರೀತಿ ಆರ್‌ಎಸ್‌ಎಸ್ ಅನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿತ್ತು. ಅದೇ ಕಾಂಗ್ರೆಸ್ ಪಕ್ಷವು ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆ ದೇಶದ ಮುಂದೆ ಇದೆ. ಮತ್ತೊಮ್ಮೆ ಆರ್‌ಎಸ್‌ಎಸ್ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ’ ಎಂದು ಸಿಮೆಂಟ್ ಮಂಜು ಗುಡುಗಿದರು.










