ಹಾಸನ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಮೊದಲ ಸಭೆ ಅ. 15ರಂದು ನಿಗದಿಯಾಗಿದೆ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಶಿವರಾಜ್.ಎಸ್.ತಂಗಡಗಿ ತಿಳಿಸಿದರು.
ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ಈಗಾಗಲೇ ಸಮಿತಿ ರಚನೆ ಮಾಡಿ ನಿನ್ನೆಯೇ ಆದೇಶ ಮಾಡಿದ್ದೇವೆ. ಅ.15ರಂದು ಮೊಟ್ಟಮೊದಲ ಸಭೆ ಕರೆದಿದ್ದೇನೆ ಎಂದರು. ಒಟ್ಟಾರೆ ಎರಡರಿಂದ ಮೂರು ಸಭೆಗಳು ನಡೆಯುತ್ತವೆ, ಆದಾದ ಮೇಲೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ಮಾಡಿ ಅಂತಿಮ ಮಾಡ್ತೇವೆ ಎಂದರು.
ಉತ್ತಮ ರೀತಿಯಲ್ಲಿ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದೇವೆ, ನಮ್ಮ ರಾಜ್ಯದ ಜನರಿಗೆ ಒಳ್ಳೆಯದಾಗಲಿ, ರಾಜ್ಯದ ರೈತರಿಗೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದರು.
ಕಳೆದ ಬಾರಿ ಒಬ್ಬನೇ ಬಂದಿದ್ದೆ, ಈ ಬಾರಿ ಪತ್ನಿ ಜೊತೆ ಬಂದಿದ್ದೇನೆ. ವಿಶಿಷ್ಟವಾಗಿ, ಅದ್ಭುತವಾಗಿ ಹಾಸನಾಂಬ ದೇವಿ ದರ್ಶನ ಆಯ್ತು. ವ್ಯವಸ್ಥೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗ್ತಿಲ್ಲ, ಆರಾಮಾಗಿ ದರ್ಶನ ಆಗ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.










