14.6 C
Munich
Home News ಸಕಲೇಶಪುರ: ಕಾಫಿ ತೋಟದಲ್ಲಿ ಕಾರ್ಮಿಕನ ಶವ ಪತ್ತೆ– ನಾಪತ್ತೆಯಾದ ಸ್ನೇಹಿತನೇ‌ ಕೊಂದನೇ?

ಸಕಲೇಶಪುರ: ಕಾಫಿ ತೋಟದಲ್ಲಿ ಕಾರ್ಮಿಕನ ಶವ ಪತ್ತೆ– ನಾಪತ್ತೆಯಾದ ಸ್ನೇಹಿತನೇ‌ ಕೊಂದನೇ?

Satish (35) of Jammanahalli village, who was working in a coffee plantation in Tarik Bailu village near Gopalpur in Yasalur hobli, taluk, has died under suspicious circumstances.

ಸಕಲೇಶಪುರ: ತಾಲ್ಲೂಕು, ಯಸಳೂರು ಹೋಬಳಿಯ ಗೋಪಾಲಪುರ ಸಮೀಪದ ತಾರಿಕ್ ಬೈಲು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜಮ್ಮನಹಳ್ಳಿ ಗ್ರಾಮದ ಸತೀಶ್ (35) ರವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೃತ ಸತೀಶ್ ಅವರು ತಮ್ಮ ಸ್ನೇಹಿತ ಕೃಷ್ಣ (ಜಯಂತಿ ನಗರ, ಮಗ್ಗೆ ಸಮೀಪ) ಅವರೊಂದಿಗೆ ಸಹದೇವ್ ಶೆಟ್ಟಿ ಎಂಬುವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕಾಫಿ ತೋಟದಲ್ಲಿರುವ ಕಾರ್ಮಿಕರ ವಸತಿ ಗೃಹದಲ್ಲಿ ವಾಸವಿದ್ದರು.

ಸೋಮವಾರ ತನ್ನ ಸ್ವಗ್ರಾಮ ಜಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ತೋಟಕ್ಕೆ ತೆರಳಿದ್ದ ಸತೀಶ್, ಇಂದು ಮಧ್ಯಾಹ್ನ ಪಕ್ಕದ ವಸತಿ ಗೃಹದವರು ಮೃತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಯಸಳೂರು ಠಾಣೆಯ ಪಿಎಸ್‌ಐ ಸಲ್ಮಾನ್ ಖಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಸತೀಶ್ ತಲೆ ಭಾಗಕ್ಕೆ ದೊಣ್ಣೆಯಿಂದ ಹೊಡೆದ ಗುರುತುಗಳು ಪತ್ತೆಯಾಗಿದೆ. ಘಟನಾ ಸ್ಥಳದಲ್ಲೇ ರಕ್ತದ ಮಚ್ಚುಗಳ ಜೊತೆಗೆ ಒಂದು ಮರದ ದೊಣ್ಣೆ ಕೂಡ ಪತ್ತೆಯಾಗಿದೆ.

ಪೊಲೀಸರು ಪ್ರಾಥಮಿಕವಾಗಿ ಇಬ್ಬರು ಪಾನಮತ್ತರಾಗಿ ಜಗಳವಾಡಿ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದು, ಸತೀಶ್ ಸ್ನೇಹಿತ ಕೃಷ್ಣ ನಾಪತ್ತೆಯಾಗಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಸದ್ಯ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೋಸ್ಟ್‌ಮಾರ್ಟಂ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ನಿಖರ ಕಾರಣ ಬೆಳಕಿಗೆ ಬರಲಿದೆ.

ಮೃತ ಸತೀಶ್ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.

– ಕನ್ನಡಪೋಸ್ಟ್ ಸುದ್ದಿ, ಸಕಲೇಶಪುರ

error: Content is protected !!