ಮಂಡ್ಯ : ಎಲೆಚಾಕನಹಳ್ಳಿಯಲ್ಲಿ ದಲಿತರ ತೋಟಿ ಇನಾಂ ಭೂಮಿ ರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ದಲಿತ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕೆಂದು ಘೊಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ನೀಡಿದರು.
ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಪುರದಲ್ಲಿ ಆಶ್ರಯ ನಿವಾಸಿಗಳಿಗಾಗಿ ನಿವೇಶನ ಹಂಚಿಕೆ ಮಾಡಿ ಕಳೆದ 20 ವರ್ಷದಿಂದ ಬಳಕೆ ಮಾಡುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಸಾರ್ವಜನಿಕ ರಸ್ತೆಯನ್ನು ಸಮರ್ಪಕ ಮತ್ತು ನಿಯಮಾನುಸಾರ ಕ್ರಮವಹಿಸದೆ ಸಿವಿಲ್ ನ್ಯಾಯಾಲಯ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ.
ಇದನ್ನು ತೆರವುಗೊಳಿಸುವಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಂಡವಪುರ ತಾಲೂಕು ಮೇಲುಕೋಟೆ ಸ.ನಂ.68 ರಲ್ಲಿ ಸರ್ಕಾರಿ ಭೂಮಿಯಲ್ಲಿ ಕಳೆದ 20 ವರ್ಷದಿಂದಲೂ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಅಲೆಮಾರಿ ಸಮುದಾಯದವರಿಗೆ ಭೂಸುಧಾರಣೆ ಕಾಯ್ದೆಯ ಅನ್ವಯ ಸಕ್ರಮಗೊಳಿಸಿ, ಹಕ್ಕುಪತ್ರ ನೀಡಬೇಕು.
ಮದ್ದೂರು ತಾಲೂಕು ಕೊಪ್ಪ ಗ್ರಾಮ ಪಂಚಾಯಿತಿಯ ಹುರುಗಲವಾಡಿ ಗ್ರಾಮದ ಸ.ನಂ.158 ರಲ್ಲಿ ಸರ್ಕಾರ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿರುವ ನಿವೇಶನ ಸಂಖ್ಯೆ 13 ಮತ್ತು 14ನೇ ನಿವೇಶನದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದಿರುವ ಭೂ ಅಕ್ರಮ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ, ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಶರಾವತಿ ಅಶ್ವಥ್, ಬಿ.ಆನಂದ್, ಕೊತ್ತತ್ತಿ ಮಹದೇವ್, ಮುತ್ತುರಾಜು, ಪುಟ್ಟಮ್ಮ, ಪ್ರೇಮಾ, ರವಿ, ಜಯಬೋರ, ಪುಟ್ಟಮ್ಮ, ಕೆ.ಎಸ್.ಶಿವಲಿಂಗಯ್ಯ, ಕೆ.ಎಸ್.ಪುಟ್ಟಸ್ವಾಮಿ, ರೇಖಾ ಭಾಗವಹಿಸಿದ್ದರು










