ಚನ್ನರಾಯಪಟ್ಟಣ, ಅ.6 : ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡೂರಾವ್ ಅವರು ಲಿಂಗಾಯಿತ ಪ್ರತ್ಯೇಕ ಧರ್ಮ ರಚನೆ ಮತ್ತು ಸಿಎಂ ಬದಲಾವಣೆ ಕುರಿತ ಚರ್ಚೆ ಕುರಿತು ಸ್ಪಷ್ಟನೆ ನೀಡಿದರು.
“ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರವು ಆ ಸಮಾಜಕ್ಕೆ ಬಿಟ್ಟ ವಿಷಯ. ನಾನು ಆ ಸಮಾಜದ ಪ್ರತಿನಿಧಿಯಲ್ಲ. ಅವರ ಬೇಡಿಕೆ ಆಧಾರದ ಮೇಲೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಈಗ ತೀರ್ಮಾನ ಮಾಡುವ ಅಧಿಕಾರ ಕೇಂದ್ರ ಸರ್ಕಾರದದಾಗಿದೆ,” ಎಂದು ಹೇಳಿದರು.
ಅವರು ಮುಂದುವರಿದು, “ಒಂದು ಗುಂಪು ನಾವು ಪ್ರತ್ಯೇಕ ಧರ್ಮ ಎಂದು ಹೇಳುತ್ತದೆ, ಮತ್ತೊಂದು ಗುಂಪು ವೀರಶೈವ ಲಿಂಗಾಯಿತರು ಹಿಂದೂ ಧರ್ಮದ ಅಡಿಯಲ್ಲೇ ಬರುತ್ತೇವೆ ಎಂದು ಹೇಳುತ್ತದೆ. ಈ ವಿಷಯದಲ್ಲಿ ಸರ್ಕಾರ ಅಥವಾ ಪಕ್ಷ ಹಸ್ತಕ್ಷೇಪ ಮಾಡದಿರಲು ತೀರ್ಮಾನಿಸಿದೆ. ಇದು ಸಂಪೂರ್ಣವಾಗಿ ಸಮಾಜದ ಆಂತರಿಕ ನಿರ್ಧಾರ,” ಎಂದರು.
ನಿನ್ನೆ ಅನೇಕ ಮಠಾಧೀಶರು “ನಮ್ಮದು ಲಿಂಗಾಯಿತ ಧರ್ಮ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೂ ಅವರು ಉಲ್ಲೇಖಿಸಿದರು.
ಸಿಎಂ ಬದಲಾವಣೆ ವಿಚಾರದಲ್ಲೂ ಸ್ಪಷ್ಟನೆ
ಸಿಎಂ ಬದಲಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, “ಬಸವರಾಜ ರಾಯರೆಡ್ಡಿ ಅವರಂತೆಯೇ ಅನೇಕರು ಆಕಾಂಕ್ಷಿಗಳಾಗಿರಬಹುದು. ನಾನೂ ಆಕಾಂಕ್ಷಿ ಅಂತ ಹೇಳಬಹುದು. ಆದರೆ ತೀರ್ಮಾನ ಹೈಕಮಾಂಡ್ ಅವರದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇದ್ದಾರೆ, ಹೈಕಮಾಂಡ್ ತೀರ್ಮಾನದ ಪ್ರಕಾರವೇ ಸರ್ಕಾರ ನಡೆಯುತ್ತಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ,” ಎಂದು ಹೇಳಿದರು.
ಅವರು ಇನ್ನೂ ಹೇಳಿದರು —
“ಕೆಲವರ ಹೇಳಿಕೆಗಳಿಂದ ಈ ವಿಷಯ ಬಂದುಬಿಟ್ಟಿದೆ. ವಾಸ್ತವದಲ್ಲಿ ನಮ್ಮ ರಾಷ್ಟ್ರ ಮಟ್ಟದ ಕಾಂಗ್ರೆಸ್‌ನಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆಯೇ ಆಗಿಲ್ಲ. ಸಿಎಂ ಅವರು ಇದ್ದಾಗ ಇನ್ನೊಬ್ಬರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ,” ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಮೆಟ್ರೋಗೆ ಬಸವಣ್ಣ ಅವರ ಹೆಸರು ಕುರಿತು ಅಭಿಪ್ರಾಯ
ಮೆಟ್ರೋ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ಇಡಬೇಕು ಎಂಬ ವಿಷಯಕ್ಕೂ ಸಚಿವರು ಸ್ಪಷ್ಟನೆ ನೀಡಿದರು.
“ಬಸವಣ್ಣ ಅವರ ಸಿದ್ಧಾಂತಗಳು ಲಿಂಗಾಯಿತರಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರಿಗೂ ಮಾದರಿ. ಬಸವ ತತ್ವವನ್ನು ಅನುಸರಿಸಲು ಲಿಂಗಾಯಿತ ಅಥವಾ ವೀರಶೈವ ಆಗಬೇಕೆಂಬುದಿಲ್ಲ. ಸಾಮಾಜಿಕ ಸಮಾನತೆ ಮತ್ತು ವೈಜ್ಞಾನಿಕ ಚಿಂತನೆಗೆ ನೆಲೆ ಬೆಳೆಸಿದವರು ಬಸವಣ್ಣ,” ಎಂದು ಹೇಳಿದರು.
“ಅವರ ಹೆಸರನ್ನು ಒಂದು ಮೆಟ್ರೋ ಸ್ಟೇಷನ್‌ಗೆ ಇಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುತ್ತದೆ ಎಂದು ನಂಬಿದ್ದೇನೆ. ಎಲ್ಲರೂ ಬಸವ ತತ್ವ ಪಾಲಿಸಿದ್ದರೆ ಸಮಾಜದಲ್ಲಿ ಈಗಾಗಲೇ ಅನೇಕ ಸುಧಾರಣೆಗಳು ನಡೆದಿರುತ್ತವೆ,” ಎಂದು ಹೇಳಿದರು.










