5.8 C
Munich
Home News ಶ್ರವಣಬೆಳಗೊಳ: ಸೆ.18 ರಂದು ಡಾ.ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ  ಪುರಸ್ಕಾರ

ಶ್ರವಣಬೆಳಗೊಳ: ಸೆ.18 ರಂದು ಡಾ.ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ  ಪುರಸ್ಕಾರ

ಚನ್ನರಾಯಪಟ್ಟಣ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ: 18-09-2025 ಗುರುವಾರ ಬೆಳಗ್ಗೆ 11-30 ಕ್ಕೆ ಶ್ರೀಕ್ಷೇತ್ರ ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ನೆರವೇರಲಿದ್ದು, ಜಿಲ್ಲೆ ಹಾಗೂ ತಾಲೂಕಿನ ಸಾಹಿತ್ಯ ಪ್ರಿಯರು, ಶ್ರೀಮಠದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಹಡೇನಹಳ್ಳಿ ಹೇಳಿದರು.
 ಪಟ್ಪಣದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ  ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಲಿದ್ದು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಸಿ.ಎನ್.ಬಾಲಕೃಷ್ಣ ರವರು ಪ್ರಶಸ್ತಿ ಪ್ರಧಾನ ನೆರವೇರಿಸಲಿದ್ದಾರೆ.
  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಎಚ್.ಎಲ್.ಮಲ್ಲೇಶಗೌಡರು ಅಭಿನಂದನಾ ನುಡಿ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀಮತಿ ರಮಾಕುಮಾರಿ ಸಿದ್ಧಲಿಂಗಯ್ಯರವರು, ಡಾ. ಮಾನಸ ಸಿದ್ಧಲಿಂಗಯ್ಯರವರು, ಕೇಂದ್ರ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಎಚ್.ಬಿ.ಮದನಗೌಡ, ಗೌರವ ಕೋಶಾಧ್ಯಕ್ಷ ಡಿ.ಆರ್.ವಿಜಯಕುಮಾರ್,
ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಲೋಕೇಶ್ ಹಡೇನಹಳ್ಳಿ ರವರು ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಬಿ.ಆರ್.ಯುವರಾಜ್ ರವರು ಉಪಸ್ಥಿತಿ ವಹಿಸಲಿದ್ದಾರೆ.
   2024 ನೇ ಸಾಲಿನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಜನಮನದ ಜನ್ನಿ ಎಂದೇ ಖ್ಯಾತರಾದ ಶ್ರೀ ಎಚ್.ಜನಾರ್ಧನ್ ರವರು ಹಾಗೂ 2025 ನೇ ಸಾಲಿನ ಪ್ರಶಸ್ತಿಗೆ ಶೂದ್ರ ಶ್ರೀನಿವಾಸ್ ರವರು ಭಾಜನರಾಗಿದ್ದು, ಸೆ.18 ರಂದು ಪ್ರಶಸ್ತಿ ಪುರಸ್ಕಾರ ನೆರವೇರಲಿದೆ.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಮಾರ್ಗದರ್ಶಿ ಸಮಿತಿ ಸದಸ್ಯ ಡಾ.ಯುವರಾಜ್, ಹೋಬಳಿ ಅಧ್ಯಕ್ಷ ನಾಗೇಂದ್ರ ರಾಯ, ಸಂಘಟನಾಕಾರ್ಯದರ್ಶಿ ಜಬೀವುಲ್ಲಾ, ಕಸಾಪ ಮಹಿಳಾ ಪ್ರತಿನಿಧಿ ಯಶೋಧ ಜೈನ್ ಸುದ್ದಿಗೋಷ್ಟಿಯಲ್ಲಿದ್ದರು.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ.ಸಿದ್ದಲಿಂಗಯ್ಯ ಅವರು ದಲಿತ ಕವಿ ಎಂದೇ ಪ್ರಸಿದ್ಧರಾದವರು. ಶ್ರವಣಬೆಳಗೊಳದಲ್ಲಿ ನಡೆದ ೮೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಮ್ಮೇಳನದ ಸವಿನೆನಪಿಗಾಗಿ ಇವರ ಹೆಸರಿನಲ್ಲಿ ಕೇಂದ್ರ ಕಸಾಪ, ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಸಾಹಿತ್ಯ, ಹೋರಾಟ, ವಿಚಾರಧಾರೆ, ಚಲನಚಿತ್ರ, ದಲಿತ, ಸಾಮಾಜಿಕ ಚಳವಳಿ ಹಾಗೂ ಸಮಾಜಮುಖಿ ಚಳವಳಿಗಳಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.
ಜನ್ನಿ: ಮೈಸೂರಿನವರಾದ ಎಚ್.ಜನಾರ್ಧನ್(ಜನ್ನಿ), ನಾಲ್ಕೂವರೆ ದಶಕಗಳಿಂದ ರಂಗಭೂಮಿ, ಭಾರತೀಯ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಅರಿವು ಹಾಗೂ ಬದಲಾವಣೆಗೆ ರಂಗಭೂಮಿಯೇ ಅಸ್ತ್ರವೆಂದು ನಂಬಿ ತಾತ್ವಿಕ ನೆಲೆಗಟ್ಟಿನಿಂದ ರಂಗಚಟುವಟಿಕೆ ಗಳಲ್ಲಿ ಹೆಸರಾದ ನಿರ್ದೇಶಕರಾದಿ, ಗಾಯಕರಾಗಿ ನಟರಾಗಿ, ಬೀದಿ ನಾಟಕಗಳ ರೂವಾರಿಯಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಖ್ಯಾತನಾಮರಾಗಿದ್ದಾರೆ.
ಶ್ರೀನಿವಾಸ್: ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನವರಾದ ಶೂದ್ರ ಶ್ರೀನಿವಾಸ್ ರೈತಸಂಘ, ಅಂಕಣಕಾರ ಸೇವೆ ಸಲ್ಲಿಸಿದ್ದಾರೆ. ಶೂದ್ರ ಸಾಹಿತ್ಯ ಪತ್ರಿಕೆ ಸ್ಥಾಪಿಸಿ ಮುನ್ನಡೆಸಿದ ಹೆಗ್ಗಳಿಕೆ ಇವರು. ಸುಮಾರು ೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ಕೃತಿಯನ್ನು ಮೊಟ್ಟ ಮೊದಲಿಗೆ ಮುದ್ರಿಸಿ ಪ್ರಕಟಿಸಿದ ಕೀರ್ತಿ ಇವರದ್ದಾಗಿದೆ.
error: Content is protected !!