ಹಾಸನ: ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಗೊದ್ದು ಗ್ರಾಮದಲ್ಲಿ ಕಾಫಿ ತೋಟದ ಭೂಮಿ ಸರ್ವೆ ಪ್ರಕ್ರಿಯೆಯಲ್ಲಿ ಸರ್ವೆಯರ್ ಹಣದ ಆಮಿಷಕ್ಕೆ ಒಳಗಾಗಿ ಸುಳ್ಳು ಸ್ಕೆಚ್ ಸಿದ್ಧಪಡಿಸಿರುವುದಲ್ಲದೆ, ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಲೀಕ ಹೆಚ್.ಎನ್. ಬೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವೆ ನಂ.92/2ರಲ್ಲಿ ನನಗೆ 4.38ಎಕರೆ ಕಾಫಿ ತೋಟವಿದೆ.ಇದು ಪೋಡಿ ಆದಾಗ ನಾಲ್ಕು ಭಾಗ ಮಾಡಲಾಯಿತು. ಆದರೆ ಚಿಕ್ಕಪ್ಪ ಜಿ.ಆರ್.ಮಲ್ಲೇಶ್ ಎಂಬುವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ಬಿಡಲು ಒಪ್ಪದೇ ಇದ್ದಾಗ ನಾನು ಸಕಲೇಶಪುರ ಸಿವಿಲ್ ಹಿರಿಯ ನ್ಯಾಯಾಲಯದ ಮೊರೆ ಹೋದೆ ಎಂದರು.ನ್ಯಾಯಾಲಯದ ಸೂಚನೆ ಮೇರೆ ಸಕಲೇಶಪುರ ಭೂಮಾಪನ ಕಚೇರಿಯಿಂದ ಮನು ಎಂಬುವರು ಸರ್ವೆಯರ್ ತೋಟಕ್ಕೆ ಬಂದು ಮೂಲ ಟಿಪ್ಪಣಿಯಂತೆ ಸರ್ವೆ ಮಾಡುವುದಾಗಿ ಹೇಳಿದರು.
ಅದಾದ ಬಳಿಕ ೨ನೇ ಬಾರಿಗೂ ಅವರೇ ಸರ್ವೆ ಮಾಡಲು ಆಗಮಿಸಿದರು. ಈ ವೇಳೆ ಮಲ್ಲೇಶ್ ಹಾಗೂ ಅವರ ಮಗ ಸಂತೋಷ್ ಇವರ ಒತ್ತಾಯಕ್ಕೆ ಮಣಿದು ಸುಳ್ಳು ಹೇಳಿ ತೋಟದ ಮೂಲ ಸ್ಕೆಚ್ ಇಲ್ಲವೆಂದು, ಇದ್ದರೂ ತಾಂತ್ರಿಕ ದೋಷ ಇದೆ ಎಂದು ತಪ್ಪು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಮೂಲಕ ಕೋರ್ಟನ್ನೂ ಮಿಸ್‌ಗೈಡ್ ಮಾಡಿದರು.ಅದನ್ನು ಆಧರಿಸಿ ಕೋರ್ಟ್ ನಮ್ಮ ಪ್ರಕರಣವನ್ನು ಕೈ ಬಿಟ್ಟಿದೆ ಎಂದರು.
ಇದರಿಂದ ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ನ್ಯಾಯಾಲಯದ ಗೌರವಕ್ಕೂ ಧಕ್ಕೆಯಾಗಿದೆ. ಸುಮಾರು15 ವರ್ಷಗಳ ಹಿಂದೆ ಮೂಲ ಟಿಪ್ಪಣಿಯಂತೆ ಸರ್ವೆ ನಡೆಸಿ, ಎಲ್ಲಾ ಅಣ್ಣ ತಮ್ಮಂದಿರ ಒಪ್ಪಿಗೆಯೊಂದಿಗೆ ಕಾನೂನು ಬದ್ಧ ದಾಖಲೆಗಳೂ ಸಿದ್ಧವಾಗಿದ್ದವು. ಆದರೀಗ ಅದನ್ನೇ ನಿರ್ಲಕ್ಷ್ಯ ಮಾಡಿ ಸುಳ್ಳು ಸ್ಕೆಚ್ ತಯಾರಿಸಿ ನ್ಯಾಯಾಲಯಕ್ಕೂ ಸಲ್ಲಿಸುವ ಮೂಲಕ ನಮಗೆ ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಾನಿ ಉಂಟಾಗಿದೆ. ಹತ್ತು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ಹೀಗಾದರೆ ಬಡವರಿಗೆ ನ್ಯಾಯ ಸಿಗೋದು ಹೇಗೆ ಎಂದು ಪ್ರಶ್ನಿಸಿದರು.
ಸರ್ವೆಯರ್ ಮನು ಹಾಗೂ ನಂತರ ಬಂದ ಪುನೀತ್ ಇಬ್ಬರೂ ನಮ್ಮ ಪ್ರತಿವಾದಿಗಳ ಆಮಿಷಕ್ಕೆ ಮಣಿದು ಸತ್ಯ ಮರೆ ಮಾಚಿದರು. ಇದರಿಂದ ನಮ್ಮ ಹಕ್ಕು ಕಳೆದು ಹೋಗುವಂತಾಗಿದೆ. ತಪ್ಪು ಸ್ಕೆಚ್ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪತ್ನಿ ಜ್ಯೋತಿ, ಸುಬ್ರಹ್ಮಣ್ಯ ಇದ್ದರು.










