ಹಾಸನ: ಸದೃಢ ಸಮಾಜ ನಿರ್ಮಾಣದಲ್ಲಿ ಗುರುಗಳು ವಹಿಸುವ ಪಾತ್ರ ಅತ್ಯಮೂಲ್ಯವಾಗಿರುತ್ತದೆಂದು ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಹೇಳಿದರು.
ನಗರದ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ಮಂಗಳವಾರ ಹಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಆಶೀರ್ವಚನ ನೀಡಿದ ಅವರು, ಗುರುಗಳ ಸೇವೆ, ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಧಿಕವಾಗಿರುತ್ತದೆ. ಸಮಾಜದ ನವೀನ ಪೀಳಿಗೆಯನ್ನು ರೂಪಿಸುವ ಶಕ್ತಿ ಗುರುಗಳಲ್ಲಿ ಅಡಕವಾಗಿದೆ. ಮಹಾಸಭಾ ವತಿಯಿಂದ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮತ್ತು ಎಲ್ಲರೂ ಆಸಕ್ತಿಯಿಂದ ವಿನೂತನ ಕಾರ್ಯಕ್ರಮ ಆಚರಿಸುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸೆ. ೨೧ರ ಭಾನುವಾರ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅರ್ಥಪೂರ್ಣ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ಶಿಕ್ಷಕರಾದ ಜಯಶೀಲಮ್ಮ, ವಿ.ಎಸ್. ರಾಣಿ, ನಿವೃತ್ತ ಶಿಕ್ಷಕ ಯು.ಎಸ್. ಬಸವರಾಜ್, ಸೋಮಶೇಖರ್, ಮಲ್ಲಿಕಾರ್ಜುನ್, ರಾಧಿಕಾ, ಗೌರಿ, ಅನುಸೂಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮತಿ, ತಾಲ್ಲೂಕು ಅಧ್ಯಕ್ಷೆ ಮಮತಾ ಪಾಟೀಲ್ ಇತರರಿದ್ದರು.










