ಸಕಲೇಶಪುರ: ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಕಾರ್ಮಿಕರು ಈ ದೇಶದ ನಿಜವಾದ ಆಸ್ತಿ ಎಂದು ಇಲ್ಲಿಯ ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿಜಯಶಂಕರ್ ಹೇಳಿದರು.
ಪಟ್ಟಣದ ಮಳಲಿ ಗ್ರಾಮದ ಪಂಕಜ ಹಾಗೂ ವಿಜಯ್ ಶಂಕರ್ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ರೈತ ಮಿತ್ರ ಕಾರ್ಯಕ್ರಮದಲ್ಲಿ ಭತ್ತದ ಸಸಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಹಿತಿ ಮತ್ತು ತಂತ್ರಜ್ಞಾನ ವ್ಯವಸ್ಥೆಯಲ್ಲಿ ಎಷ್ಟೇ ಅಭಿವೃದ್ಧಿ ಹೊಂದಿರಬಹುದು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮನುಷ್ಯ ಸಾಧನೆ ಮಾಡಿರಬಹುದು, ಇನ್ನೂ ಮಾಡಬಹುದು ಆದರೆ ತಿನ್ನುವ ಅನ್ನವನ್ನೆ ಬೆಳೆಯುವ ರೈತನಿಗೆ ಮೊದಲ ಸ್ಥಾನ ಹಾಗೂ ಗೌರವ ಸಲ್ಲಿಸಬೇಕು ಎಂದರು.
ದೇಶದ ಎಲ್ಲಾ ಕಡೆ ಅಲಲ್ಲಿಯ ರೋಟರಿ ಸಂಸ್ಥೆಗಳು ಪ್ರತಿ ವರ್ಷ ರೈತರ ಗದ್ದೆ, ಹೊಲಗಳಿಗೆ ಹೋಗಿ ರೈತರೊದಿಗೆ ನಾಟಿ, ಬಿತ್ತನೆಗೆ ಕೈ ಜೋಡಿಸಿ, ಪ್ರಗತಿ ಪರ ರೈತರು ಹಾಗೂ ಕಾರ್ಮಿಕರನ್ನು ಸನ್ಮಾನ ಮಾಡುವಂತಹ ಕೆಲಸ ಶ್ಲಾಘನೀಯ ಎಂದರು.
ರೋಟರಿ ಟ್ರಸ್ಟ್ ಅಧ್ಯಕ್ಷ ಎನ್.ಸಿ. ಸ್ವಾಮಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಇಂದು ಕೃಷಿ ಭೂಮಿಯನ್ನೆಲ್ಲಾ ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡಲಾಗುತ್ತಿದೆ. ಪರಿವರ್ತನೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಹಾರಕ್ಕಾಗಿ ಅಂಗಲಾಚಬೇಕಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಗಳು ಭತ್ತ ಬೆಳೆಯುವ ಗದ್ದೆಗಳು, ಧಾನ್ಯ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯುವ ಹೊಲಗಳನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದಂತ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದರು.
ಕಾರ್ಮಿಕರಾದ ರವಿ ಹಾಗೂ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರು, ರೋಟರಿ ಮಹಿಳೆಯರು, ಮಕ್ಕಳು ಸಹ ಭತ್ತದ ಸಸಿ ನಾಟಿ ಮಾಡಿದರು.
ಕಾರ್ಮಿಕರಾದ ರವಿ ಹಾಗೂ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರು, ರೋಟರಿ ಮಹಿಳೆಯರು, ಮಕ್ಕಳು ಸಹ ಭತ್ತದ ಸಸಿ ನಾಟಿ ಮಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಜಿ. ಚಂದ್ರಶೇಖರ್, ಚನ್ನವೇಣಿ ಎಂ. ಶೆಟ್ಟಿ, ಆಶಾ ಶಿವಪ್ರಸಾದ್, ಶಿವಪ್ರಸಾದ್ ಹಾಗೂ ಇತರರು ಇದ್ದರು, ಜಾನೇಕೆರೆ ಆರ್. ಪರಮೇಶ್ ಸ್ವಾಗತಿಸಿದರು, ಹರೀಶ್ ವಂದಿಸಿದರು
—










