ಚನ್ನರಾಯಪಟ್ಟಣ: ತಾಲ್ಲೂಕಿನಾದ್ಯಂತ ತೆಂಗು ಬೆಳೆಗೆ ವಿವಿಧ ರೋಗಬಾಧೆ ಕಾಣಿಸಿಕೊಂಡಿದ್ದು ರೈತವರ್ಗ ಕಂಗಾಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಿಡಗ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ದಿ ಮಂಡಳಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳೆ ತೆಂಗು ತೋಟಗಳ ಪ್ರಾತ್ಯಕ್ಷತೆ(ಎಲ್‌ಒಡಿಪಿ) ಕಾರ್ಯಕ್ರಮದಲ್ಲಿ ಹಸಿರೆಲೆ ಗೊಬ್ಬರದ ಬೀಜಗಳು ಹಾಗೂ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸದ ವಿಚಾರವಾದರೆ, ಅದೇ ತೆಂಗು ಬೆಳೆಗೆ ರೂಗೋಸ್, ರಸ ಸೋರುವುದು, ಚುಕ್ಕಿ ಹಾಗೂ ನುಸಿರೋಗ ಸೇರಿದಂತೆ ವಿವಿಧ ರೋಗಬಾಧೆ ಕಾಣಿಸಿಕೊಂಡಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ರೋಗಪೀಡಿತ ತೆಂಗು ಬೆಳೆಯ ಬಗ್ಗೆ ಚರ್ಚಿಸಿ ತೆಂಗುಬೆಳೆ ಪುನಶ್ಚೇತನ ಹಾಗೂ ಅಭಿವೃದ್ಧಿ ಸಲುವಾಗಿ ೧೦೦ ಕೋಟಿ ರೂ. ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕಿನ ಪ್ರಮುಖ ಹಾಗೂ ಆರ್ಥಿಕವಾದ ತೆಂಗು ಬೆಳೆಯು ರೈತರ ಬದುಕಿನ ಆಸರೆಯಾಗಿದ್ದು ಇತ್ತೀಚಿನ ವರ್ಷಗಳಿಂದ ವಿವಿಧ ರೋಗಬಾಧೆಗೆ ತುತ್ತಾಗಿರುವ ಪರಿಣಾಮ ರೈತರು ಸಂಕಷ್ಟದ ಕೂಪಕ್ಕೆ ಸಿಲುಕಿಕೊಂಡಿದ್ದಾರೆ. ಸಂಕಷ್ಟದಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನ ಅಗತ್ಯವಿದೆ ಎಂದು ತಿಳಿಸಿದರು.
ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧,೧೮೩ ರೈತ ಫಲಾನುಭವಿಗಳಿಗೆ ಹಸಿರೆಲೆ ಗೊಬ್ಬರದ ಬೀಜಗಳು, ಬೇವಿನ ಇಂಡಿ, ಬೇವಿನ ಎಣ್ಣೆ ಅಲ್ಲದೆ ಸೂಕ್ಷ್ಮ ಪೋಷಕಾಂಶಗಳಾದ ಮೆಗ್ನಿಷಿಯಂ, ಬೋರಾಕ್ಸ್, ಜಿಂಕ್, ಸೂಡೋಮೋನಸ್ ಸೇರಿದಂತೆ ತಲಾ ಫಲಾನುಭವಿಗಳಿಗೆ ೭ ಸಾವಿರ ರೂ. ಮೌಲ್ಯದ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.










