ಹಾಸನ ಮಹಾನಗರ ಪಾಲಿಕೆಗೆ ಸಿಗದ ಅನುದಾನ: ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಹೆಚ್.ಪಿ. ಸ್ವರೂಪ್

ಹಾಸನ: ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವ ರಾಜ್ಯ ಸರ್ಕಾರ, ಅದಕ್ಕೆ ಪೂರಕವಾದ ಅನುದಾನ ನೀಡದೆ ವಂಚನೆ ಮಾಡಿದೆ ಎಂದು ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅಸಮಾಧಾನ ಹೊರ ಹಾಕಿದರು.

ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದ ಶಾಸಕರು, ಕಳೆದ ಅಧಿವೇಶನದಲ್ಲಿ ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ್ದು ಸಂತೋಷದ ವಿಚಾರ, ಇದಕ್ಕೆ ನಾವೂ ಕೂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೆವು. ಆದರೆ ಕೇವಲ ನಾಮಕಾವಾಸ್ತೆಗೆ ಮೇಲ್ದರ್ಜೆಗೇರಿಸಿ ಅನುದಾನ ನೀಡದೆ ಇದ್ದರೆ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಹಾನಗರ ಪಾಲಿಕೆಗಾಗಿ ಹಾಸನದ ಸುತ್ತಮುತ್ತಲ ೩೭ ಹಳ್ಳಿಗಳನ್ನು ನಗರಸಭೆಗೆ ಸೇರಿಸಿಕೊಳ್ಳಲಾಗಿದೆ. ಆದರೆ ಅವರಿಗೆ ನೀಡಬೇಕಾಗಿರುವ ಸೌಲಭ್ಯಗಳಲ್ಲಿ ವಂಚನೆ ಮಾಡಿದಂತಾಗಿದೆ.

ಈ ಹಿಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ಇದೀಗ ಮಹಾನಗರ ಪಾಲಿಕೆಗೆ ಸೇರ್ಪಡೆಯಾಗಿವೆ. ಅದಕ್ಕನುಗುಣವಾಗಿ ಅವರು ಕೂಡ ಹತ್ತು ಪಟ್ಟು ಹೆಚ್ಚು ಕಂದಾಯ ಕಟ್ಟುತ್ತಿದ್ದಾರೆ. ಆದರೆ ಆ ಗ್ರಾಮಗಳನ್ನು ಮಹಾನಗರ ಪಾಲಿಕೆ ಹಂತದಲ್ಲಿ ಅಭಿವೃದ್ಧಿಪಡಿಸಲು ಆಗುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ಈ ಹಿಂದೆ ಸರ್ಕಾರ ಅನುದಾನ ನೀಡುವ ಭರವಸೆ ನೀಡಿ ಇದೀಗ ಪೌರಾಡಳಿತ ಇಲಾಖೆ, ಮುಂದಿನ ಮೂರು ವರ್ಷ ಯಾವುದೇ ನೇಮಕಾತಿ ಅಥವಾ ಹಣ ಬಿಡುಗಡೆ ಮಾಡಲು ಆಗುವುದಿಲ್ಲ ಎಂಬ ಪತ್ರ ಹೊರಡಿಸಿದೆ. ಹೀಗಾದರೆ ಅಭಿವೃದ್ಧಿ ಹೇಗೆ, ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದ್ದು, ರಸ್ತೆಗಳು ಗುಂಡಿ ಮಯವಾಗಿದೆ. ಆದರೆ ಅವುಗಳನ್ನು ಮುಚ್ಚಲು ಹಣವಿಲ್ಲದೆ ಪರದಾಡುವಂತಾಗಿದೆ, ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಾಕುತ್ತಿದ್ದು, ನಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಸ್ಯೆ ವಿವರಿಸಿದರು. ಇದನ್ನು ಮನಗಂಡು ಮುಖ್ಯಮಂತ್ರಿಗಳು ಹಾಗೂ ಸಂಬAಧಿಸಿದ ಸಚಿವರು ಹೆಚ್ಚಿನ ಅನುದಾನ ನೀಡಿ ಹೊಸದಾಗಿ ಶಾಸಕರಾಗಿರುವ ನಮಗೆ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.