ಹಾಸನ: ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಪ್ರತಿ ತಾಲ್ಲೂಕಿನಲ್ಲಿ ದುರ್ಬಲ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಿಯಾಯೋಜನೆ ತಯಾರಿಸಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದ ಅವರು ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಿ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಉದಾಸೀನ ಮಾಡಿ ಯಾವುದೇ ವಿಷಯವನ್ನು ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತುರ್ತು ಸಂದರ್ಭಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಮ್ಯೂನಿಕೇಷನ್ ಪ್ಲಾನ್ ಮಾಡಿಕೊಳ್ಳಿ ಎಂದರಲ್ಲದೆ, ಅಗತ್ಯ ಪರಿಕರಗಳನ್ನು ದಾಸ್ತಾನು ಇರುವಂತೆ ನೋಡಿಕೊಳ್ಳಿ, ಸಮನ್ವಯತೆಯಿಂದ ಕಾರ್ಯನಿರ್ವಹಣೆ ಮಾಡುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ವಾಹನಗಳ ಸಂಚಾರಕ್ಕೆ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸುವಂತೆ ತಿಳಿಸಿದರು. ನಿರಂತರವಾಗಿ ಮಳೆ ಬಿಳುತ್ತಿರುವುದರಿಂದ ಎಚ್ಚರವಹಿಸಿ ೧೫ ದಿನಗಳು ಪ್ರತಿದಿನ ಸ್ಥಳೀಯ ತಂಡ ಗಮನಹರಿಸಿ ಎಂದ ಅವರು ಪ್ರತಿ ತಾಲ್ಲೂಕಿನಲ್ಲಿ ಕಂಟ್ರೋಲ್ ರೂಂ ತೆರೆಯಬೇಕು ಎಂದರಲ್ಲದೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ಅರಿವು ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸಿ ಅಗತ್ಯಕ್ರಮವಹಿಸಿ, ಹೆದ್ದಾರಿಯಲ್ಲಿ ವಾಹನ ಚಾಲನೆಗೆ ಅನುಕೂಲವಾಗುವಂತೆ ಸೂಚನಾ ಫಲಕಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಗಮನಹರಿಸಲುನಿರ್ದೇಶನ ನೀಡಿದರು.
ಯಾವುದೆÃ ಜೀವ ಹಾನಿಯಾಗದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು. ಅಧಿಕ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಬದಲಿ ಮಾರ್ಗ ಬಳಸಲು ಪ್ರಯಾಣಿಕರಿಗೆ ಉತ್ತೇಜಿಸಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್‌ಕುಮಾರ್, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವೆಂಕಟೇಶ್ ನಾಯ್ಡು, ತಮ್ಮಯ್ಯ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.










