ಹಾಸನ: ಎಲ್ಲಾ ಯುವಕ-ಯುವತಿಯರು ಸರಿಯಾದ ದಾರಿಯಲ್ಲಿ ಸಾಗಿ ವಿವಾಹವಾಗುವವರೆಗೂ ಬ್ರಹ್ಮಚರ್ಯ ಪಾಲನೆ ಮಾಡಿದರೆ ಈ ಮಾರಣಾಂತಿಕ ಹೆಚ್ಐವಿ. ಸೋಂಕಿನ ಹರಡುವಿಕೆಯನ್ನ ನಿಲ್ಲಿಸಬಹುದು ಎಂದು ಗಂಧದಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ರಾಜೀವ್ ನರ್ಸಿಂಗ್ ಕಾಲೇಜು, ಜಿಲ್ಲಾ ಆರೋಗ್ಯ ಇಲಾಖೆಯ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಹಾಗೂ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಏಡ್ಸ್ ಜಾಗೃತಿ ಮತ್ತು ತಡೆಗಟ್ಟುವಿಕೆ ವಿಷೇಯದ ಕುರಿತ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಜನತೆಯು ಆದಷ್ಟು ಜಾಗರೂಕರಾಗಿ ಹೆಜ್ಜೆ ಇಡಬೇಕು.
ಇತರರಿಂದ ರಕ್ತವನ್ನ ಪಡೆಯುವುದಕ್ಕಿಂತ್ತ ಮುಂಚಿತವಾಗಿ ರಕ್ತದ ಪರೀಕ್ಷೆ ಮಾಡಿಸುವುದು ಸೂಕ್ತ. ಏಡ್ಸ್ ಕಾಯಿಲೆ ಮಾನವರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ವೈರಸ್‌ನ ತೀವ್ರತೆ ಅತಿರೇಕಕ್ಕೆ ತಲುಪಿದರೆ ಸೋಂಕಿತ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿತ ವ್ಯಕ್ತಿಯಿಂದ ರಕ್ತವನ್ನ ಪಡೆದುಕೊಳ್ಳುವುದು,ಸೋಂಕಿತ ಸೂಜಿ-ಸಿರಂಜುಗಳ ಬಳಕೆ, ಹೆಚ್‌ಐಗೆ ತುತ್ತಾಗಿರುವ ತಾಯಿ ಮಗುವಿಗೆ ಸ್ತನಪಾನ ಮಾಡಿಸಿದಾಗ ಈ ಸೋಂಕು ಹರಡುತ್ತದೆ. ನಾವು ಸಾಗುವ ಮಾರ್ಗ ಉತ್ತಮವಾಗಿದ್ದರೆ ಇಂತಹ ಸೋಂಕುಗಳ ಮೂಲವನ್ನೇ ನಾಶಪಡಿಸಬಹುದು. ಸಮಾಜ ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಸಾಗಬೇಕು. ಏಡ್ಸ್ ಎಂದರೆ ಭಯಬೇಡ ಜಾಗೃತವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜೀವ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ಜಾಗೃತಿ ಕುರಿತಾದ ಜಾಗೃತಿ ನಾಟಕವನ್ನು ಪ್ರದರ್ಶನ ಮಾಡಿದರು. ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಮಂಜುಳ, ಐ.ಕ್ಯೂ.ಎ.ಸಿ. ಸಂಚಾಲಕ ಮೋಹನ್ ಕುಮಾರ್ ಹಾಗೂ ಇತರರು ಹಾಜರಿದ್ದರು.










