ನವದೆಹಲಿ: ವೈದ್ಯಕೀಯ-ಕಾನೂನು ಅರಿವನ್ನು ಹೆಚ್ಚಿಸಲು ಮತ್ತು ವೈದ್ಯರು ಹಾಗೂ ರೋಗಿಗಳmedim ಹಿತರಕ್ಷಣೆಗಾಗಿ, “ಮೆಡಿಕಲ್ ಲಾ ಅಂಡ್ ಎಥಿಕ್ಸ್” (ವೈದ್ಯಕೀಯ ಕಾನೂನು ಮತ್ತು ನೀತಿಶಾಸ್ತ್ರ) ವಿಷಯವನ್ನು MBBS ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಒಂದು ಪ್ರಮುಖ ವಿಷಯವಾಗಿ ಸೇರಿಸುವಂತೆ ಒತ್ತಾಯಿಸಿ ಹಿರಿಯ ವೈದ್ಯ ಡಾ. ಬಿ. ಸದಾನಂದ ನಾಯಕ್ ಮತ್ತು ಡಾ.ಆದೀಶ್ ಬಸು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಎನ್ಎಂಸಿ ಅಧ್ಯಕ್ಷರಿಗೆ ಸಲ್ಲಿಸಿದ ಪ್ರಸ್ತಾಪದಲ್ಲಿ ವೈದ್ಯರು, ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಕಾನೂನು ಮತ್ತು ವೈದ್ಯಕೀಯ ಕ್ಷೇತ್ರದ ನಡುವೆ ಹೆಚ್ಚುತ್ತಿರುವ ಸಂಬಂಧವನ್ನು ಒತ್ತಿಹೇಳಿದ್ದಾರೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಸರ್ವೇ ಪ್ರಕಾರ, ಶೇ.70 ಕ್ಕೂ ಹೆಚ್ಚು ವೈದ್ಯಕೀಯ ಪದವೀಧರರು ತಮ್ಮ ವೃತ್ತಿಯ ಕಾನೂನು ಅಂಶಗಳ ಬಗ್ಗೆ ಸರಿಯಾಗಿ ತರಬೇತಿ ಪಡೆದಿಲ್ಲ ಎಂದು ಭಾವಿಸುತ್ತಾರೆ.
ಹಾಗೆಯೇ, ಶೇ. 80 ಕ್ಕೂ ಹೆಚ್ಚು MBBS ವಿದ್ಯಾರ್ಥಿಗಳಿಗೆ ವೈದ್ಯಕೀಯ-ಕಾನೂನು ಕರ್ತವ್ಯಗಳ ಬಗ್ಗೆ ತಿಳಿದಿಲ್ಲ ಎಂಬ ಅಧ್ಯಯನಗಳನ್ನು ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ವೈದ್ಯರು ವೈದ್ಯಕೀಯ ಸಮುದಾಯ ಮತ್ತು ರೋಗಿಗಳ ಹಕ್ಕುಗಳ ರಕ್ಷಣೆಗಾಗಿ ಈ ವಿಷಯವನ್ನು ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಸೇರಿಸುವಂತೆ ಅವರು ಕೋರಿದ್ದಾರೆ.










