ಹಾಸನ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

ಹಾಸನ: ನಗರದ ಹಿಮ್ಸ್ ಆವರಣದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರ ಕಾರ್ಯಾರಂಭ ಮಾಡಬೇಕು ಮತ್ತು ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಬಲೀಕರಣ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಮತ್ತು ಮಾದಿಗ ದಂಡೋರ ಹಾಗೂ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟಗಳಿಂದ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್ ಮಾತನಾಡಿ, ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್.) ಅನುಗುಣವಾಗಿ ಸೌಲಭ್ಯ ನೀಡಿ ಉನ್ನತೀಕರಿಸಿ ಸಬಲೀಕರಣಗೊಳಸಿಬೇಕು ಎಂದು ಆಗ್ರಹಿಸಿದರು.

ಇದಕ್ಕಾಗಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜನಾರೋಗ್ಯಕ್ಕಾಗಿ ಜನಾಂದೋಲನ ಆರಂಭಿಸಲಾಗಿದೆ. ದಲಿತ ಸಂಘಟನೆಗಳೂ ಇದರ ಭಾಗವಾಗಿದ್ದು, ಆ.೧೫ರ ಸ್ವಾತಂತ್ರ‍್ಯ ದಿನದಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಮುಂದೆ ಜನಾರೋಗ್ಯದ ಸ್ವಾತಂತ್ರ‍್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹಠಾತ್ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನಾರೋಗ್ಯ ತುರ್ತುಸ್ಥಿತಿಯಲ್ಲಿರುವುದರ ಮುನ್ಸೂಚನೆಯಾಗಿದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸ ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ.
ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆ ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ.

ಸೂಕ್ತ ಸಮಯದಲ್ಲಿ ಕಾಯಿಲೆಗಳ ಪತ್ತೆ, ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ದೊರೆಯದೆ ಮರಣ ಹೆಚ್ಚಾಗುತ್ತಿವೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿಯಾದ ತಪಾಸಣೆ ಮತ್ತು ಚಿಕಿತ್ಸೆಗೆ ಒಳಗಾದವರು ಅತ್ಯಂತ ಆರ್ಥಿಕ ದುಸ್ಥಿತಿಗೆ ತಳ್ಳಿರುವ ಉದಾಹರಣೆ ಸಾಕಷ್ಟಿವೆ ಎಂದರು.

ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಜನರು ಖಾಸಗಿ ವ್ಯವಸ್ಥೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ದಮನಕೊಳಗಾಗಿರುವ ದಲಿತ ಸಮುದಾಯ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.