ಬೆಂಗಳೂರು : ಬಿಗ್ಬಾಸ್ ಕನ್ನಡ ಸೀಸನ್ 12ರ ವೀಕೆಂಡ್ ಎಪಿಸೋಡ್ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ರಣಹದ್ದುಗಳ ಬಗ್ಗೆ ಮಾಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಜ್ಞಾನರಹಿತವಾಗಿದೆ ಎಂದು ಆರೋಪಿಸಿ, ಡಿಎಫ್ಒ ರಾಮಕೃಷ್ಣ ಅವರ ಮೂಲಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ದಾಖಲಿಸಿದೆ.
ಈ ಬಗ್ಗೆ ಮಾತನಾಡಿದ ಡಿಎಫ್ಒ ರಾಮಕೃಷ್ಣ, “ರಣಹದ್ದುಗಳು ಜೀವ ಇರುವ ಪ್ರಾಣಿಗಳ ಮೇಲೆ ಬೇಟೆ ಆಡುವುದಿಲ್ಲ. ಸತ್ತುಹೋಗಿರುವ ಪ್ರಾಣಿಗಳ ಶವವನ್ನು ತಿಂದು ಪರಿಸರವನ್ನು ಸ್ವಚ್ಛವಾಗಿಡುವ ಅತ್ಯಂತ ಪ್ರಮುಖ ಪರಿಸರ ಸ್ನೇಹಿ ಪಕ್ಷಿಗಳು ಅವು. ದೊಡ್ಡ ವಾಹಿನಿಯೊಂದರಲ್ಲಿ ಈ ರೀತಿಯ ತಪ್ಪು ಮಾಹಿತಿ ಪ್ರಸಾರವಾಗಿರುವುದು ಸೂಕ್ತವಲ್ಲ. ಹೀಗಾಗಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ತಪ್ಪು ಹೇಳಿಕೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಇನ್ನು ದೂರುದಾರರ ಹೇಳಿಕೆಯಂತೆ, ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ರಣಹದ್ದುಗಳು ಹೊಂಚು ಹಾಕಿ, ಸಂಚು ರೂಪಿಸಿ ಲಬಕ್ ಅಂತ ಬೇಟೆ ಆಡುವಂತಿವೆ ಎಂದು ಹೇಳಿದ್ದರು. ಆದರೆ ವಾಸ್ತವವಾಗಿ ರಣಹದ್ದುಗಳು ಜೀವ ಇರುವ ಯಾವುದೇ ಜೀವಿಗಳನ್ನೂ ಮುಟ್ಟುವುದಿಲ್ಲ.
ಸತ್ತ ಪ್ರಾಣಿಗಳ ಶವಗಳನ್ನು ಮಾತ್ರ ತಿಂದು ಪರಿಸರ ಸಮತೋಲನ ಕಾಪಾಡುತ್ತವೆ. ರಣಹದ್ದುಗಳ ಸಂತತಿಯ ಸಂರಕ್ಷಣೆಗೆ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿರುವ ನಾವು, ಜ್ಞಾನದ ಕೊರತೆಯಿಂದ ಈ ರೀತಿಯ ಹೇಳಿಕೆ ನೀಡಬಾರದು ಎಂದು ಸಂರಕ್ಷಣಾ ಟ್ರಸ್ಟ್ ಕಿಡಿಕಾರಿದೆ.
ಇದಕ್ಕೂ ಮೊದಲು ರಕ್ಷಿತಾ ಶೆಟ್ಟಿ ಅವರನ್ನು ನೋಡಿ ‘ಪಿತ್ತ ನೆತ್ತಿಗೇರಿತು’ ಎಂದು ಹೇಳಿದ ಪ್ರಕರಣದಲ್ಲಿಯೂ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿತ್ತು. ಅದೇ ರೀತಿ ರಿಷಾ ಗೌಡ ಅವರ ಬಟ್ಟೆಯನ್ನು ಮುಟ್ಟಿದ ಆರೋಪದಡಿ ಗಿಲ್ಲಿ ನಟನ ವಿರುದ್ಧವೂ ದೂರು ದಾಖಲಾಗಿರುವುದು ಗಮನಾರ್ಹ. ಒಟ್ಟಿನಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಸಂಬಂಧಿಸಿದಂತೆ ಒಂದಾದ ಮೇಲೆ ಒಂದರಂತೆ ದೂರುಗಳು ದಾಖಲಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಇನ್ನು ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಪ್ರಸ್ತುತ ಕಾವ್ಯ ಶೈವ, ಗಿಲ್ಲಿ ನಟ, ಧನುಷ್ ಗೌಡ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಅವರು ಮನೆಯೊಳಗೆ ಉಳಿದಿದ್ದಾರೆ. ಇವರಲ್ಲಿ ಯಾರು ಟಾಪ್ ಫೈವ್ಗೆ ಪ್ರವೇಶ ಪಡೆಯುತ್ತಾರೆ? ಅಂತಿಮವಾಗಿ ಯಾರು ವಿನ್ನರ್ ಆಗುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.










