ಭಾರತ : ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ನಿರಾಶಾಜನಕ ಪ್ರದರ್ಶನ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಒಂದಾನೊಂದು ಕಾಲದಲ್ಲಿ ಐಸಿಸಿ ಟೂರ್ನಿಗಳಲ್ಲಿ ಅಪ್ರತಿಹತ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಕಾಂಗರೂ ಪಡೆ, ಈಗ ಗ್ರೂಪ್ ಹಂತದಲ್ಲೇ ಹೊರಬೀಳುವ ಪರಿಸ್ಥಿತಿಗೆ ತಲುಪಿದೆ. 2023ರಲ್ಲಿ ಭಾರತದಲ್ಲಿ ನಡೆದ ICC Cricket World Cup ಗೆದ್ದು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಆಸ್ಟ್ರೇಲಿಯಾ ತಂಡದ ಅದೃಷ್ಟ ಹದಗೆಟ್ಟಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಆ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತವನ್ನು ಮಣಿಸಿ ಟ್ರೋಫಿ ಎತ್ತಿದ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ Mitchell Marsh ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ನೀಡಿದ್ದದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕ್ರೀಡಾಭಿಮಾನಿಗಳಿಂದ ಟೀಕೆಗೂ ಗುರಿಯಾಯಿತು. “ಅಹಂಕಾರಕ್ಕೆ ಅಂತ್ಯ ಅನಿವಾರ್ಯ” ಎಂಬ ಅಭಿಪ್ರಾಯಗಳು ಆ ವೇಳೆ ವ್ಯಕ್ತವಾಗಿದ್ದವು.
ಆ ಘಟನೆಯ ಬಳಿಕ ಆಸ್ಟ್ರೇಲಿಯಾ ತಂಡ ಐಸಿಸಿ ಟೂರ್ನಿಗಳಲ್ಲಿ ಹಳೆಯ ಪ್ರಭಾವ ತೋರಿಸಲು ವಿಫಲವಾಗಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶವೇ ಸಾಧ್ಯವಾಗಲಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೆಮಿಫೈನಲ್ ಹಂತದಲ್ಲೇ ಪಯಣ ಅಂತ್ಯಗೊಂಡಿತು. ಸತತವಾಗಿ ಪ್ರಶಸ್ತಿ ರೇಸ್‌ನಿಂದ ಹೊರಬೀಳುತ್ತಿರುವುದು ತಂಡದ ಮೇಲೆ ಒತ್ತಡ ಹೆಚ್ಚಿಸಿದೆ.
ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಜಿಂಬಾಬ್ವೆ ಎದುರು ಸೋಲು ಕಂಡಿದ್ದು, ಸೂಪರ್-8 ಹಂತಕ್ಕೇರಲು ಸಂಕಷ್ಟದಲ್ಲಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದು ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದೆ. ಜಿಂಬಾಬ್ವೆ ಎರಡು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಮೂರನೇ ಸ್ಥಾನದಲ್ಲಿದೆ.
ಇದೀಗ ಆಸೀಸ್ ತಂಡದ ಸ್ಥಿತಿ ಹೇಗಿದೆ ಎಂದರೆ, ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲಬೇಕು ಎಂದು ಎದುರು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದರೆ ಆಸ್ಟ್ರೇಲಿಯಾದ ಹೋರಾಟ ಗ್ರೂಪ್ ಹಂತದಲ್ಲೇ ಅಂತ್ಯಗೊಳ್ಳಲಿದೆ. ಒಂದು ಕಾಲದಲ್ಲಿ ಎದುರಾಳಿಗಳು ಆಸ್ಟ್ರೇಲಿಯಾವನ್ನು ಭಯಪಡುವ ಸ್ಥಿತಿ ಇತ್ತಾದರೆ, ಈಗ ಆಸೀಸ್ ಮತ್ತೊಬ್ಬರ ಗೆಲುವಿಗಾಗಿ ಕಾಯುವ ಪರಿಸ್ಥಿತಿಗೆ ತಲುಪಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.










